ಗೃಹ ಸಚಿವರ ನಿವಾಸಕ್ಕೆ ಎಬಿವಿಪಿ ಮುತ್ತಿಗೆ- ಪಿಎಸ್ಸೈ ಸಹಿತ ಇಬ್ಬರ ಅಮಾನತು

ಬೆಂಗಳೂರು, ಜು.30: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಪಿಎಸ್ಸೈ ಸೇರಿದಂತೆ ಇಬ್ಬರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಜೆಸಿ ನಗರ ಪೊಲೀಸ್ ಠಾಣೆಯ ಪಿಎಸ್ಸೈ  ರಾಜೇಸಾಬ್ ಹಾಗೂ ಹೆಡ್ ಕಾನ್‍ಸ್ಟೆಬಲ್ ಶ್ರೀನಿವಾಸ್ ಮೂರ್ತಿ ಅವರನ್ನು ಸೇವೆಯಿಂದ ಅಮಾನತು ಮಾಡಿ ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ ಅವರು ಆದೇಶ ನೀಡಿದ್ದಾರೆ. 

ಇಂದು ಬೆಳಿಗ್ಗೆ ಜಯಮಹಲ್ ಬಳಿಯ ಆರಗ ಜ್ಞಾನೇಂದ್ರ ಅವರ ಸರಕಾರಿ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ಈ ವೇಳೆ ತ್ವರಿತ ಕ್ರಮ ಕೈಗೊಳ್ಳಬೇಕಾದ ಪೊಲೀಸರು ಕರ್ತವ್ಯಲೋಪ ಎಸಗಿದ್ದ ಆರೋಪ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ  ಇಬ್ಬರನ್ನೂ ಅಮಾನತು ಮಾಡಲಾಗಿದೆ.

ಮತ್ತೊಂದೆಡೆ ಜೆ.ಸಿ.ನಗರ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ವರ್ಗಾವಣೆ ಆಗಿದ್ದು, ಖಾಲಿಯಾಗಿರುವ ಈ ಹುದ್ದೆಗೆ  ಪಿಎಸ್ಸೈ ರಾಜೇಸಾಬ್ ಅವರಿಗೆ ಪ್ರಭಾರಿಯಾಗಿ ಠಾಣಾಧಿಕಾರಿ ಜವಾಬ್ದಾರಿ ನೀಡಲಾಗಿತ್ತು. ಆದರೆ, ಇವರು ತ್ವರಿತವಾಗಿ ಸ್ಥಳಕ್ಕೆ ಹೋಗದಿರುವುದರಿಂದ ಪ್ರತಿಭಟನೆ ತೀವ್ರ ರೂಪ ಪಡೆಯಿತು ಎಂಬ ಮಾತುಗಳು ಕೇಳಿಬಂದಿದೆ.

ಇನ್ನು ಗೃಹ ಸಚಿವರ ಸರಕಾರಿ ನಿವಾಸಕ್ಕೆ ಮುತ್ತಿಗೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಬಿವಿಪಿ ಕಾರ್ಯಕರ್ತರ ವಿರುದ್ದ ಎಫ್‍ಐಆರ್ ದಾಖಲಾಗಿದ್ದು,

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 30 ಜನರ ವಿರುದ್ಧ ಜೆ.ಸಿ.ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 448 ( ಮನೆಗೆ ಅತಿಕ್ರಮ ಪ್ರವೇಶ), 143 (ಕಾನೂನು ಬಾಹಿರ ಗುಂಪುಗಾರಿಕೆ)147 (ಕಾನೂನು ಉಲ್ಲಂಘಿಸಿ ಪ್ರತಿಭಟನೆ)149 (ಗುಂಪುಗೂಡಿ ಕಾನೂನು ಬಾಹಿರ ಪ್ರತಿಭಟನೆ) ಅಡಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!