ಮಸೂದ್ ಮತ್ತು ಫಾಝಿಲ್ ಕುಟುಂಬಕ್ಕೆ ಮುಸ್ಲಿಂ ಸೆಂಟ್ರಲ್ ಕಮಿಟಿ 30 ಲಕ್ಷ ರೂ.ಪರಿಹಾರ ಘೋಷಣೆ
ಮಂಗಳೂರು, ಜು.30 : ದ.ಕ.ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣದ ಹಿನ್ನಲೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಶಾಂತಿ ಸಭೆಯನ್ನು ಮುಸ್ಲಿಂ ಸಂಘಟನೆಗಳು ಬಹಿಷ್ಕರಿಸಿದ ಬೆನ್ನಲ್ಲೇ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್‌ರ ಅವರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಸಲಾಯಿತು.
ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್‌ರ ಸ್ವಗೃಹದಲ್ಲಿ ನಡೆದ ಈ ಸಭೆಯಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಮೃತ ಬೆಳ್ಳಾರೆಯ ಮುಹಮ್ಮದ್ ಮಸೂದ್ ಮತ್ತು ಮಂಗಳಪೇಟೆಯ ಮುಹಮ್ಮದ್ ಫಾಝಿಲ್ ಕುಟುಂಬಕ್ಕೆ ತಲಾ 30 ಲಕ್ಷ ರೂ. ಪರಿಹಾರ ನೀಡಲು ನಿರ್ಧರಿಸಲಾಯಿತು.
ಹಾಗೂ ಸಭೆಯಲ್ಲಿ ಜಿಲ್ಲೆಯಲ್ಲಿ ನಡೆದ ಮೂರು ಅಮಾಯಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೇವಲ ಪ್ರವೀಣ್ ನೆಟ್ಟಾರು ಬಿಜೆಪಿ ಕಾರ್ಯಕರ್ತನ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ 25 ಲಕ್ಷ ರೂ. ಪರಿಹಾರ ನೀಡಿರುವುದನ್ನು ಮತ್ತು ಉಳಿದ ಇಬ್ಬರು ಅಮಾಯಕ ಮುಸ್ಲಿಮರ ಮನೆಗೆ ಭೇಟಿ ನೀಡದೆ ಮುಖ್ಯಮಂತ್ರಿಯವರ ಅಮಾನವೀಯ ನಿಲುವಿಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಯಿತು. ಜೊತೆಗೆ ಪ್ರಕರಣದ ಬಗ್ಗೆ ಕುಟುಂಬಸ್ಥರಿಗೆ ಕಾನೂನಿನ ನೆರವು ನೀಡಲು ನಿರ್ಣಯಿಸಲಾಯಿತು.
ಜಿಲ್ಲೆಯ ಸಮಸ್ತ ನಾಗರಿಕರು ಶಾಂತಿಯನ್ನು ಕಾಪಾಡಬೇಕು ಮತ್ತು ಮೃತಪಟ್ಟ ಮೂವರು ಕುಟುಂಬಸ್ಥರಿಗೆ ನೋವನ್ನು ಭರಿಸುವ ಶಕ್ತಿಯನ್ನು ದೇವನು ಅನುಗ್ರಹಿಸಲೆಂದು ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಸಭೆಯಲ್ಲಿ ಸಾಂತ್ವನ ನೀಡಿದರು.
ಸಭೆಯಲ್ಲಿ ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್, ಮಾಜಿ ಶಾಸಕ ಮೊಯ್ದಿನ್ ಬಾವಾ, ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷರಾದ ಹಾಜಿ ಇಬ್ರಾಹಿಂ ಕೋಡಿಜಾಲ್, ಹಾಜಿ ಬಿ.ಎಂ. ಮುಮ್ತಾಝ್ ಅಲಿ, ಕೆ. ಅಶ್ರಫ್, ಹನೀಫ್ ಹಾಜಿ ಬಂದರ್, ಸೈಯದ್ ಅಹ್ಮದ್ ಬಾಷಾ ತಂಙಳ್ ಮತ್ತಿತರರು ಉಪಸ್ಥಿತರಿದ್ದರು.
ದ.ಕ.ಮತ್ತು ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ದ.ಕ.ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ, ಮುಸ್ಲಿಂ ವರ್ತಕರ ಸಂಘ, ಮುಸ್ಲಿಂ ಜಸ್ಟೀಸ್ ಫೋರಂ ಕರ್ನಾಟಕ ಮತ್ತಿತರ ಸಂಘಟನೆಗಳು ಶಾಂತಿ ಸಭೆಯನ್ನು ಬಹಿಷ್ಕರಿಸಿತ್ತು.