ಆಗುಂಬೆ ಘಾಟಿ ಭೂ ಕುಸಿತ: ಘನ ವಾಹನ ಸಂಚಾರ ಆ.31 ರ ವರೆಗೆ ನಿಷೇಧ
ಉಡುಪಿ ಜು.29(ಉಡುಪಿ ಟೈಮ್ಸ್ ವರದಿ): ಆಗುಂಬೆ ಘಾಟಿಯ 11ನೇ ತಿರುವಿನಲ್ಲಿ ಭೂ ಕುಸಿತ ಉಂಟಾಗಿರುವುದರಿಂದ ಘನ ವಾಹನಗಳ ಸಂಚಾರವನ್ನು ಆ.31 ರ ವರೆಗೆ ನಿಷೇಧಿಸಲಾಗಿದೆ.
ಈ ಬಗ್ಗೆ ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅವರ ಮನವಿ ಮೇರೆಗೆ
ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ಆದೇಶ ಹೊರಡಿಸಿದ್ದು, ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿಯ 11ನೇ ತಿರುವುವಿನಲ್ಲಿ ಭೂಕುಸಿತವಾಗಿರುವ ಹಿನ್ನಲೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು ಆ.31 ರವರೆಗೆ ಸ್ಥಗಿತಗೊಳಿಸಿ ಬಸ್ ಹಾಗೂ ಲಘು ವಾಹನ ಸಂಚಾರಕ್ಕೆ ಮಾತ್ರ ಅನುವು ಮಾಡಲಾಗಿದೆ.
ಭೂ ಕುಸಿತವಾಗಿರುವ ರಸ್ತೆಯ ಬದಿಯಲ್ಲಿ ಬಿದ್ದು ಹೋಗಿದ್ದ ಗಾರ್ಡ್ ವಾಲ್ ನ ಮರು ನಿರ್ಮಾಣ ಕಾಮಗಾರಿಯನ್ನು ಕೈಗೊಂಡಿದ್ದು ಸದ್ಯ ತಾತ್ಕಾಲಿಕ ದುರಸ್ಥಿ ಕಾರ್ಯ ಮುಂದುವರೆದಿದೆ. ದುರಸ್ಥಿ ಸಂಪೂರ್ಣವಾಗಿ ಮುಗಿಯಲು ಎರಡು ವಾರಗಳ ಕಾಲಾವಧಿ ಬೇಕಾಗಿದೆ. ಪ್ರಸ್ತುತ ಅಗುಂಬೆ ಘಾಟಿಯಲ್ಲಿ ಅಗಾಗ್ಗೆ ಮಳೆ ಅಗುತ್ತಿದ್ದು ಮಳೆಯಿಂದ ಮತ್ತೆ ಭೂಕುಸಿತ ಉಂಟಾಗುವ ಸಾಧ್ಯತೆ ಇರುವುದರಿಂದ ಭಾರಿ ವಾಹನಗಳ ಸಂಚಾರವನ್ನು ಆ.31 ರವರೆಗೆ ಸ್ಥಗಿತಗೊಳಿಸಲಾಗಿದೆ.
ಹಾಗೂ ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಆಗುಂಬೆ ಘಾಟಿಯ ಮೂಲಕ ಲಘು ವಾಹನ ಹಾಗೂ ಬಸ್ಸುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.