ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್: ಬೆಳ್ಳಾರೆ-ಸುಬ್ರಹ್ಮಣ್ಯ ಠಾಣೆಯ ಪಿಎಸ್ಸೈ ವರ್ಗಾವಣೆ
ದ.ಕ ಜು.29 : ಬೆಳ್ಳಾರೆಯಲ್ಲಿ ಬರ್ಬರವಾಗಿ ಹತ್ಯೆಯಾದ ಪ್ರವೀಣ್ ನೆಟ್ಟಾರು ಅವರ ಅಂತಿಮ ಯಾತ್ರೆಯ ವೇಳೆ ನಡೆದ ಲಾರಿ ಚಾರ್ಚ್ ನಲ್ಲಿ ಕೆಲ ಹಿಂದೂ ಕಾರ್ಯಕರ್ತರ ಮೇಲೆ ವಿನಾ ಕಾರಣ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈ ಆರೋಪದ ಬೆನ್ನಲ್ಲೇ ಬೆಳ್ಳಾರೆ ಮತ್ತು ಸುಬ್ರಹ್ಮಣ್ಯ ಠಾಣೆಯ ಪಿಎಸ್ಸೈಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಆದೇಶ ಹೊರಡಿಸಿದ್ದಾರೆ. ಬೆಳ್ಳಾರೆ ಉಪ ನಿರೀಕ್ಷಕ ರುಕ್ಮ ನಾಯ್ಕ್ ಹಾಗೂ ಸುಬ್ರಹ್ಮಣ್ಯ ಎಸ್‍ಐ ಜಂಬೂರಾಜ್ ಮಹಾಜನ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಬೆಳ್ಳಾರೆಯ ನೂತನ ಠಾಣಾಧಿಕಾರಿಯಾಗಿ ಕುಂದಾಪುರ ಗ್ರಾಮಾಂತರ ಠಾಣೆಯ ಪಿಎಸ್ಸೈ ಸುಹಾಸ್ ರವರನ್ನು ನೇಮಕ ಮಾಡಲಾಗಿದೆ. ಅದೇರೀತಿ ಸುಬ್ರಹ್ಮಣ್ಯ ಠಾಣಾಧಿಕಾರಿಯಾಗಿ ವಿಟ್ಲ ಠಾಣೆಯ ಪಿಎಸ್ಸೈ ಮಂಜುನಾಥ್ ಟಿ. ಅವರನ್ನು ನಿಯೋಜಿಸಿ ಆದೇಶಿಸಲಾಗಿದೆ. ಆದರೆ ರುಕ್ಮ ನಾಯ್ಕ್ ಹಾಗೂ ಜಂಬೂರಾಜ್ ಮಹಾಜನ್ ಅವರನ್ನು ಎಲ್ಲಿಗೆ ವರ್ಗಾವಣೆ ಮಾಡಲಾಗಿದೆ ಎಂಬ ಬಗ್ಗೆ ನಿರ್ದಿಷ್ಟ ಠಾಣೆ ತೋರಿಸಿಲ್ಲ.
ಸಂಬಂಧಪಟ್ಟ ಪೊಲೀಸ್ ಅಧೀಕ್ಷಕರು ಈ ಪಿಎಸ್‍ಐ ರವರುಗಳನ್ನು ಪ್ರಸ್ತುತ ಅವರು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಿಂದ ಕೂಡಲೇ ಯಾವುದೇ ಕಾಲವನ್ನು ಉಪಯೋಗಿಸಿಕೊಳ್ಳದೇ ವರ್ಗಾವಣೆ ಮಾಡಲಾದ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಿ ಬಿಡುಗಡೆಗೊಳಿಸಬೇಕು. ಅವರನ್ನು ಬಿಡುಗಡೆ ಮಾಡಿದ ಹಾಗೂ ಕರ್ತವ್ಯಕ್ಕೆ ವರದಿ ಮಾಡಿಕೊಂಡ ದಿನಾಂಕದ ಬಗ್ಗೆ ಈ ಕಛೇರಿಗೆ ಮಾಹಿತಿ ನೀಡಬೇಕು. ಪಿಎಸ್‍ಐ ರವರ ವರ್ಗಾವಣೆ ಆದೇಶದಿಂದಾಗಿ ಸ್ಥಳ ನಿಯುಕ್ತಿಗೊಳ್ಳಲು ಬಾಕಿಯಾಗುವ ಪಿಎಸ್‍ಐ ರವರನ್ನು ಮುಂದಿನ ಸ್ಥಳ ನಿಯುಕ್ತಿಗಾಗಿ ಪ.ವ. ಕಛೇರಿಯಲ್ಲಿ ವರದಿ ಮಾಡುವಂತೆ ಸೂಚಿಸಿ ಕಳುಹಿಸಬೇಕು ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.
ಹತ್ಯೆಯಾದ ಪ್ರವೀಣ್ ನೆಟ್ಟಾರು ಅವರ ಪಾರ್ಥೀವ ಶರೀರದ ಅಂತಿಮ ಯಾತ್ರೆ ವೇಳೆ ನಡೆದ ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ತಪ್ಪಿಸಲು ಹೋಗಿದ್ದ ವೇಳೆ ಕೇರಳ ರಾಜ್ಯದ ಕಾಸರಗೋಡಿನ ಹಿರಿಯ ಅರ್ ಎಸ್ ಎಸ್ ಸ್ವಯಂ ಸೇವಕ ರಮೇಶ್ ಎಂಬವರ ಮೇಲೆ ಲಾಠಿಯಿಂದ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿತ್ತು. ಈ ಲಾಠಿ ಚಾರ್ಜ್ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಲಾಠಿಚಾರ್ಜ್ ಮಾಡಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ಜನಪ್ರತಿನಿಧಿಗಳನ್ನು ಕಾರ್ಯಕರ್ತರು ಒತ್ತಾಯಿಸಿದ್ದರು. ಅದರಂತೆ ಬೆಳ್ಳಾರೆ ಹಾಗೂ ಸುಬ್ರಹ್ಮಣ್ಯ ಠಾಣೆಯ ಪೊಲೀಸ್ ಪಿಎಸ್‍ಐ ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.