ಪ್ರವೀಣ್ ಹತ್ಯೆ ಪ್ರಕರಣ ಎನ್.ಐ.ಎ ತನಿಖೆಗೆ- ಸಿಎಂ ಬೊಮ್ಮಾಯಿ
ಬೆಂಗಳೂರು ಜು.29: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಎನ್.ಐ.ಎ ಗೆ ವರ್ಗಾಯಿಸಲು ತೀರ್ಮಾನಿಸಿರೋದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಬಳಿಕ ಈ ಬಗ್ಗೆ ಮಾತನಾಡಿದ ಅವರ, ಪ್ರಕರಣದ ಕುರಿತು ಡಿಜಿ ಐಜಿಪಿ ಪ್ರವೀಣ್ ಸೂದ್ ಜೊತೆ ಚರ್ಚೆ ಮಾಡಿದ್ದೇನೆ. ಪ್ರವೀಣ್ ಹತ್ಯೆ ಆರ್ಗನೈಸಡ್ ಕ್ರೈಂ ಆಗಿದ್ದು, ಪ್ರಕರಣದ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇನೆ. ಈ ಬಗ್ಗೆ ತನಿಖೆ ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಪ್ರಕರಣ ಎರಡು ರಾಜ್ಯಕ್ಕೆ ಸಂಬಂಧಿಸಿದ್ದಾಗಿದ್ದು, ಪ್ರಕರಣವನ್ನು ಎನ್ಐಎ ಗೆ ವಹಿಸಲು ತೀರ್ಮಾನಿಸಿದ್ದೇವೆ, ಈ ವಿಚಾರವಾಗಿ ಎನ್ ಐಎಗೆ ಪತ್ರ ಬರೆಯುವುದಕ್ಕೆ ಹೇಳಿದ್ದೇನೆ ಎಂದರು.
ಕೇರಳ ಗಡಿಯಲ್ಲಿ ಸಿಸಿಟಿವಿ ಅಳವಡಿಸಿ, ಚೆಕ್ ಪೋಸ್ಟ್ ಹಾಕಿ ಕಣ್ಗಾವಲು ಮಾಡಲು ಸೂಚನೆ ನೀಡಲಾಗಿದೆ. ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಪೋಲಿಸ್ ಕ್ಯಾಂಪ್ ಮಾಡಲು ತಿಳಿಸಲಾಗಿದೆ. ಕೆಎಸ್ ಆರ್ ಪಿ ಬೆಟಾಲಿಯನ್ ದಕ್ಷಿಣ ಕನ್ನಡದಲ್ಲಿ ನೇಮಕ ಮಾಡಲು ಸೂಚನೆ ನೀಡಲಾಗಿದೆ. ರಾತ್ರಿ ಹೊತ್ತು ಹೆಚ್ಚು ಗಸ್ತು ಮಾಡಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.