ಬೈಂದೂರು: ಕ್ಷುಲ್ಲಕ ಕಾರಣಕ್ಕೆ ಕುತ್ತಿಗೆ ಕೊಯ್ದು ಯುವಕ ಪರಾರಿ
ಬೈಂದೂರು ಜು.29 (ಉಡುಪಿ ಟೈಮ್ಸ್ ವರದಿ): ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ನಡೆದ ಗಲಾಟೆಯಲ್ಲಿ ಯುವಕನೋರ್ವ ಮತ್ತೊಬ್ಬ ಯುವಕನ ಕುತ್ತಿಗೆ ಕೊಯ್ದು ಘಟನೆ ಬೈಂದೂರಿನ ನಂದನವನ ಗ್ರಾಮದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಯುವಕ ಪ್ರಸನ್ನ ಎಂದು ಗುರುತಿಸಲಾಗಿದೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ಪ್ರಸನ್ನ ಬೈಂದೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜು.27 ರಂದು ರಾತ್ರಿ ಪ್ರಸನ್ನ ಅವರು ತಮ್ಮ ಸ್ನೇಹಿತ ಮನೋಜ ಖಾರ್ವಿ ಅವರೊಂದಿಗೆ ನಂದನವನ ಗ್ರಾಮದ ಹೋಟೇಲ್ ಗೆ ಹೋಗಿ ಊಟ ಮಾಡಿ ಹೊರ ಬಂದು ಅಲ್ಲೆ ಇದ್ದ ಸುದರ್ಶನ ಹಾಗೂ ಯತೀಶ್ ಎಂಬಾತನೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಪ್ರಸನ್ನ ಸುದರ್ಶನ್ ನಲ್ಲಿ ಏನು ಮಾತನಾಡುತ್ತಿದ್ದೀರಿ ಎಂದು ವಿಚಾರಿಸಿದ್ದು ಆ ಸಮಯ ಸುದರ್ಶನನು ಪ್ರಸನ್ನನಿಗೆ ಅವಾಚ್ಯವಾಗಿ ಬೈದು ಅದನ್ನು ಕೇಳಲು ನೀನು ಯಾರು ಎಂಬುದಾಗಿ ಕೇಳಿದ್ದಾನೆ. ಈ ವೇಳೆ ಪ್ರಸನ್ನ ಹಾಗೂ ಸುದರ್ಶನ್ ನ ಮಧ್ಯೆ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದು, ಸುದರ್ಶನನು ಚೂರಿಯಿಂದ ಪ್ರಸನ್ನನ ಕುತ್ತಿಗೆ ಕೊಯ್ದು ಹಲ್ಲೆ ಮಾಡಿದ್ದಾನೆ. ಮಾತ್ರವಲ್ಲದೆ ಕೃತ್ಯ ಎಸಗಿ ಸುದರ್ಶನ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಮನೋಜ ಖಾರ್ವಿ ಅವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.