ಉಡುಪಿ: ಜಿಲ್ಲೆಯ ಸಂಘಟನೆಯ ಪ್ರಮುಖರಿಗೆ ಎಚ್ಚರಿಕೆಯಿಂದ ಇರಲು ಸೂಚನೆ
ಉಡುಪಿ ಜು.29 : ದ.ಕ ಜಿಲ್ಲೆಯಲ್ಲಿ ಮತ್ತೊಂದು ಕೊಲೆ ಪ್ರಕರಣ ನಡೆದಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಉಡುಪಿ ಜಿಲ್ಲೆಯ ವಿವಿಧ ಸಂಘಟನೆಗಳ ಪ್ರಮುಖರಿಗೆ ಎಚ್ಚರದಿಂದ ಇರುವಂತೆ ಪೊಲೀಸ್ ಇಲಾಖೆಯಿಂದ ಸಂದೇಶ ರವಾನೆ ಮಾಡಲಾಗಿದೆ ಎಂದು ವರದಿಯಗಿದೆ.
ಪ್ರವೀಣ್ ಹತ್ಯೆಯಿಂದ ಬೆಚ್ಚಿಬಿದ್ದಿದ್ದ ಕರಾವಳಿ ಸುಧಾರಿಸಿಕೊಳ್ಳುವ ಮೊದಲೇ ಸುರತ್ಕಲ್ ನಲ್ಲಿ ಮತ್ತೂಂದು ಕೊಲೆ ನಡೆದಿರುವುದರಿಂದ ಪೊಲೀಸ್ ಇಲಾಖೆ ಕೂಡ ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ. ಹಾಗೆಯೇ ಸಂಘ ಪರಿವಾರ ಸಹಿತವಾಗಿ ವಿವಿಧ ಸಂಘಟನೆಗಳ ಪ್ರಮುಖರಿಗೆ ಎಚ್ಚರದಿಂದ ಇರುವಂತೆ ಹಾಗೂ ರಾತ್ರಿ ವೇಳೆಯಲ್ಲಿ ಒಬ್ಬೊಬ್ಬರಾಗಿ ಸುತ್ತಾಡದಂತೆ ಸಲಹೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಕಾರಿ ವಿಷ್ಣು ವರ್ಧನ್ ಅವರು, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗ ಸೇರಿದಂತೆ ಸೂಕ್ಷ್ಮ ಪ್ರದೇಶ, ಚೆಕ್ ಪೋಸ್ಟ್‍ಗಳಲ್ಲಿ ಬೀಟ್ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ಅನುಮಾನಾಸ್ಪದ ನಡೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾ ಗುತ್ತಿದ್ದು, ಸಾರ್ವಜನಿಕರು ಕೂಡ ಈ ಬಗ್ಗೆ ಯಾವುದೇ ಮಾಹಿತಿ ಇದ್ದರೂ ಪೊಲೀಸ್ ಇಲಾಖೆಗೆ ನೀಡಬಹುದು. ಚೆಕ್ ಪೋಸ್ಟ್ ಗಳಲ್ಲಿ ನಿರಂತರ ತಪಾಸಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.