ಉದ್ವಿಗ್ನ ಪರಿಸ್ಥಿತಿ- ಇಂದು (ಜು.29) ಪಣಂಬೂರು, ಮೂಲ್ಕಿ, ಬಜಪೆ, ಸುರತ್ಕಲ್ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ರಜೆ

ಮಂಗಳೂರು: ಗುರುವಾರ ರಾತ್ರಿ ದುಷ್ಕರ್ಮಿಗಳು ಫಾಝಿಲ್ ಹತ್ಯೆಯಿಂದ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವುದರಿಂದ ಪೊಲೀಸ್ ಕಮಿಷನರ್ ಮನವಿಯ ಮೇರೆಗೆ‌ ಪಣಂಬೂರು, ಮೂಲ್ಕಿ, ಬಜಪೆ, ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.

ಜು.30ರ ವರೆಗೆ ನಿಷೇಧಾಜ್ಞೆ: ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಎಲ್ಲ ಕಡೆಗಳಲ್ಲಿ ಗುರುವಾರ ರಾತ್ರಿ 10 ಗಂಟೆಯಿಂದ ಜು.30ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.

ಗುರುವಾರ ರಾತ್ರಿ ಸುರತ್ಕಲ್‌ನಲ್ಲಿ ಕಾರ್‌ನಲ್ಲಿ ಬಂದಿದ್ದ ನಾಲ್ವರು ಮುಸುಕುದಾರಿ ದುಷ್ಕರ್ಮಿಗಳು ಬಟ್ಟೆ ಅಂಗಡಿಗೆ ನುಗ್ಗಿ ಮಹಮ್ಮದ್ ಫಾಸಿಲ್ (23) ಅವರನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದಿದ್ದರು.

ಸುರತ್ಕಲ್ ಕಾಟಿಪಳ್ಳ ಮಂಗಳಪೇಟೆ ನಿವಾಸಿ ಮಹಮ್ಮದ್ ಫಾಝಿಲ್ ಅವರು, ರಾತ್ರಿ 8 ಗಂಟೆಯ ಸುಮಾರಿಗೆ ಎಂಆರ್‌ಪಿಎಲ್‌ ರಸ್ತೆಯ ಸುರತ್ಕಲ್ ಮಾರುಕಟ್ಟೆ ಸನಿಹದ ಸಂಕೀರ್ಣದಲ್ಲಿರುವ ಬಟ್ಟೆ ಅಂಗಡಿಗೆ ಹೋಗುತ್ತಿರುವ ಸಂದರ್ಭದಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರ ಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದೆ.

ಸುಳ್ಯದ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಮಹಮ್ಮದ್‌ ಅವರ ಕೊಲೆ ನಡೆದಿದೆ ಎಂದು ಮಾಜಿ ಶಾಸಕ ಮೊಹಿಯುದ್ದೀನ್ ಬಾವ ಆರೋಪಿಸಿದ್ದಾರೆ.

ಈ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಫಾಝಿಲ್‌ ಎಂಆರ್‌ಪಿಎಲ್‌ನಲ್ಲಿ ಗುತ್ತಿಗೆ ಕಾಮಗಾರಿ ನಿರ್ವಹಿಸುತ್ತಿದ್ದರು.

Leave a Reply

Your email address will not be published. Required fields are marked *

error: Content is protected !!