ಹುಲಿಯ ಬೆನ್ನಟ್ಟಿರುವ ನಮಗೆ ಮನೆಯೊಳಗೆ ಬಂದು ಬೆಚ್ಚನೆ ಮಲಗಿರುವ ಕಾಳಿಂಗ ಸರ್ಪದ ಅರಿವೇ ಆಗಿಲ್ಲ…
ಉಡುಪಿ ಜು.28 (ಉಡುಪಿ ಟೈಮ್ಸ್ ವರದಿ): ಕಸ್ತೂರಿರಂಗನ್ ವರದಿಯನ್ನು ವಿರೊಧಿಸುವ ಬರದಲ್ಲಿ ಕರ್ನಾಟಕ ಸೇರಿದಂತೆ ದೇಶ ವ್ಯಾಪಿ, ಬಹತೇಕ ಸಂರಕ್ಷಿತ ಅರಣ್ಯಗಳು, ವನ್ಯಜೀವಿ ಅಭಯಾರಣ್ಯಗಳನ್ನು ಹಾಗೂ ಅದಕ್ಕೆ ಹೊಂದಿಕೊಂಡಿರುವ ಗ್ರಾಮಗಳ ಬಹಳಷ್ಟು ಪ್ರದೇಶಗಳನ್ನು ಪರಿಸರ ಸೂಕ್ಷ್ಮವಲಯ ಎಂದು 2017 ರಿಂದಲೇ ಘೋಷಿಸುತ್ತಾ ಬಂದಿದ್ದರೂ, ಆ ಬಗ್ಗೆ ರಾಜ್ಯ ಸರಕಾರಗಳು ಹಾಗೂ ಆ ಭಾಗದ ಜನ ಪ್ರತಿನಿಧಿಗಳು ಮಾತ್ರ ತಿಳಿದೋ ಅಥವಾ ತಿಳಿಯದೆಯೋ ಮೌನವಾಗಿಯೇ ಇದ್ದಾರೆ ಎಂದು ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಹೇಳಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಸಮಿತಿ ಜಿಲ್ಲಾ ಪ್ರ. ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಅವರು, ಕಸ್ತೂರಿರಂಗನ್ ವರದಿಯೆಂಬ ಹುಲಿಯ ಬೆನ್ನಟ್ಟಿರುವ ನಮಗೆ, ಮನೆಯ ಒಳಗೆ ಬೆಚ್ಚನೆ ಬಂದು ಮಲಗಿರುವ ಕಾಳಿಂಗ ಸರ್ಪದ ಅರಿವೇ ಆಗಿಲ್ಲ. ಪರಿಸರ ಸೂಕ್ಷ್ಮವಲಯ ಎಂಬುದು ಪ್ರೋ. ಮಾಧವ ಗಾಡ್ಗಿಲ್ ಸಮಿತಿಯಲ್ಲಿ ನೀಡಿರುವ ವಿಚಾರವಾಗಿರುವುದರಿಂದ ಆ ಗ್ರಾಮಗಳಲ್ಲಿ ತಿಳಿಸಿರುವ ಭೂ ಪ್ರದೇಶಗಳು ಗಾಡ್ಗಿಲ್ ವರದಿಯಲ್ಲಿ ತಿಳಿಸಲಾದ ನಿರ್ಬಂಧ ಹಾಗೂ ನಿಯಂತ್ರಣಗಳಿಗೆ ಒಳಪಡುವುದರಲ್ಲಿ ಅನುಮಾನವಿಲ್ಲ.
ಉಡುಪಿ ಜಿಲ್ಲೆಗೆ ಹೊಂದಿಕೊಂಡಿರುವ ಮುಖಾಂಬಿಕಾ ವನ್ಯ ಜೀವಿ ಅಭಯಾರಣ್ಯವನ್ನು 2017ರ ಎ.13 ರಂದು ಗಜೆಟ್ ಪ್ರಕಟಣೆ ಹೊರಡಿಸಿ, ಪರಿಸರ ಸೂಕ್ಷ್ಮವಲಯ ಎಂದು ಘೋಷಿಸಲಾಗಿದೆ. ಅದರಂತೆ ಸಂರಕ್ಷಿತ ಕಾಡುಗಳಲ್ಲದೆ, ಉಡುಪಿ ಜಿಲ್ಲಾ ವ್ಯಾಪ್ತಿಯ 25 ಗ್ರಾಮಗಳ 12,508.03 ಹೆಕ್ಟೇರ್ ಪ್ರದೇಶವನ್ನು ಕೂಡಾ ಪರಿಸರ ಸೂಕ್ಷ್ಮವಲಯ ಎಂದು ಘೋಷಿಸಿದೆ. ಅದರಲ್ಲಿ ಪ್ರಮುಖವಾಗಿ ಗೊಳಿಹೊಳೆ ಗ್ರಾಮದ 2,121.76 ಹೆಕ್ಟೇರ್ ಭೂಮಿ, ಯಡಮಾಗೆಯ 1,109.20 ಹೆಕ್ಟೇರ್ ಭೂಮಿ, ಹೊಸಂಗಡಿಯ 1,036.50 ಹೆಕ್ಟೇರ್ ಭೂಮಿ, ಆಜ್ರ್ರಿಯ 1,031.77 ಹೆಕ್ಟೇರ್ ಭೂಮಿಗಳು ಹಾಗೂ ಇನ್ನುಳಿದ 21 ಗ್ರಾಮಗಳ ಭೂಮಿಗಳು ಪರಿಸರ ಸೂಕ್ಷ್ಮವಲಯ ಎಂದು ಘೋಷಿಸಲಾಗಿದ್ದರೂ ಅದು ಆ ಗ್ರಾಮದ ಯಾವ ಯಾವ ಸರ್ವೇ ನಂಬ್ರ ಒಳಗೊಂಡಿದೆ ಎಂಬ ಸ್ಪಷ್ಟನೆ ಇಲ್ಲ.
ಇದೇ ರೀತಿ ಈ ಜಿಲ್ಲೆಗೆ ಹೊಂದಿಕೊಂಡು ಹಾದು ಹೋಗಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನವನ್ನು 2020 ರ ಜು.2 ರಂದು ಪರಿಸರ ಸೂಕ್ಷ್ಮವಲಯವಾಗಿ ಘೋಷಿಸಿದ್ದರು, ಅದರಲ್ಲಿ ಉಡುಪಿ ಜಿಲ್ಲೆಯ 11 ಗ್ರಾಮಗಳ ವ್ಯಾಪ್ತಿಯ 6,816.01 ಹೆಕ್ಟೇರ್ ಭೂಮಿ ಒಳಗೊಂಡಿದೆ. ಇದರೊಂದಿಗೆ 2020ರ ಆ.28 ರಂದು ಸೋಮೇಶ್ವರ ವನ್ಯ ಜೀವಿ ಅಭಯಾರಣ್ಯವನ್ನು ಕೂಡಾ ಘೋಷಿಸಿದ್ದು, ಅದರಲ್ಲಿ ಉಡುಪಿ ಜಿಲ್ಲೆಯ 16 ಗ್ರಾಮಗಳ ವ್ಯಾಪ್ತಿಯ 6,994.94 ಹೆಕ್ಟೇರ್ ಭೂಮಿ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ ಒಳಗೊಂಡಿದೆ. ಮಚ್ಚಟ್ಟು, ಹೆಬ್ರಿ ಮೊದಲಾದ ಕೆಲವು ಗ್ರಾಮಗಳು ಎರಡೆರಡು ಅರಣ್ಯ ವ್ಯಾಪ್ತಿಯಲ್ಲಿ ಬರಲಿದ್ದು, ಪ್ರತ್ಯೇಕವಾಗಿ ಭೂ ಪ್ರದೇಶಗಳನ್ನು ಘೋಷಿಸಲಾಗಿದೆ. ಒಟ್ಟಾರೆ ಮೂರು ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ಈ ಜಿಲ್ಲೆಯಲ್ಲಿ 26,319 ಹೆಕ್ಟೇರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆಯಾಗಿ ವರ್ಷಗಳೇ ಕಳೆದಿದ್ದರೂ, ಯಾರೂ ಈ ಬಗ್ಗೆ ಚಕಾರ ಎತ್ತಿಲ್ಲ. ಜಿಲ್ಲೆಯ ಶಾಸಕರು, ಸಂಸದರುಗಳಿಗೆ 2017ರಲ್ಲಿಯೇ ಭಾರತೀಯ ಕಿಸಾನ್ ಸಂಘ ಮನವಿ ಸಲ್ಲಿಸಿದ್ದರೂ, ಯಾರೂ ಈವರೆಗೆ ಸ್ಪಂದಿಸಿಲ್ಲ ಎಂದು ಖೇದ ವ್ಯಕ್ತಪಡಿಸಿದ್ದಾರೆ.
ಇವುಗಳಲ್ಲಿ ಘೋಷಿಸಲಾದ ಪ್ರದೇಶಗಳು ಯಾವ ಯಾವ ಸರ್ವೇ ನಂಬ್ರಗಳಾಗಿವೆ. ಇದರಲ್ಲಿ ರೈತರ ತೋಟ, ಮನೆ, ಗದ್ದೆಗಳು ಒಳಗೊಂಡಿವೆಯೋ ಇದನ್ನು ಗುರುತಿಸುವುದೆ ಯಾರು..? ಇನ್ನೂ ಡೀಮ್ಡ್ ಫಾರೆಸ್ಟ್‍ನಿಂದಲೇ ಹೊರ ಬರಲಾಗದೆ ಒದ್ದಾಡುತ್ತಿರುವಾಗ ಈ ಆತಂಕ ಪರಿಹಾರವಾಗುವುದು ಯಾವಾಗ…? ಎಂದು ಸಂಘಟಣೆ ಪ್ರಶ್ನಿಸಿದೆ.
ಗಜೆಟ್ ಪ್ರಕಟಣೆಯಲ್ಲಿ ತಿಳಿಸಿರುವಂತೆ ಪ್ರಕಟಣೆ ನೀಡಿ ಎರಡು ವರ್ಷದ ಒಳಗೆ ವಲಯ ಮಾಸ್ಟರ್ ಪ್ಲಾನ್ ಮಾಡಿ ಯಾವ ಯಾವ ಚಟುವಟಿಕೆ ನಿರ್ಬಂಧಿಸಬೇಕು, ಯಾವುದನ್ನು ಮುಂದುವರೆಸಬೇಕು ಎಂಬ ಯೋಜನೆ ರೂಪಿಸುವಂತೆ ಸೂಚಿಸಲಾಗಿತ್ತು. ಈ ಬಗ್ಗೆ ಪ್ರತಿ ಅರಣ್ಯ ವ್ಯಾಪ್ತಿಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಶಾಸಕರು, ಸಂಸದರುಗಳನ್ನೊಳಗೊಂಡ ಕಮಿಟಿಯೊಂದನ್ನು ರಚಿಸಲಾಗಿದ್ದು, ಆ ಕಮಿಟಿಗಳು ಸಭೆ ಸೇರಿ ತೀರ್ಮಾನ ಕೈಗೊಂಡು ಕೇಂದ್ರ ಸರಕಾರಕ್ಕೆ ಸಲಹೆ ನೀಡಿ, ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬಹುದಾಗಿದೆ.ಆದರೆ ಈ ಕಮಿಟಿಗಳ ಎಷ್ಟು ಸಭೆ ನಡೆದಿದೆ..? ಜನಸಾಮಾನ್ಯರಿಗೆ ಕಸ್ತೂರಿರಂಗನ್ ವರದಿಯೇ ತೊಡಕಾಗಿರುವಾಗ ಗಾಡ್ಗಿಲ್ ವರದಿ ಜಾರಿಗೊಂಡು ಆಗುವ ತೊಂದರೆಗಳನ್ನು ಬಗೆಹರಿಸುವ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ..? ಎಂದು ತಿಳಿಸಬೇಕಾಗಿದೆ ಎಂದು ಸಂಘಟನೆ ಸರಕಾರಕ್ಕೆ ಕೇಳಿಕೊಂಡಿದೆ.