ಪ್ರಮೋದ್ ಮುತಾಲಿಕ್ ದ.ಕ. ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ
ಮಂಗಳೂರು, ಜು 28 (ಉಡುಪಿ ಟೈಮ್ಸ್ ವರದಿ)): ದ.ಕ. ಜಿಲ್ಲೆಯ ವಿವಿಧೆಡೆ ಪ್ರಕ್ಷುಬ್ದ ಪರಿಸ್ಥಿತಿ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಜುಲೈ 28ರ ಸಂಜೆ 4 ಗಂಟೆಯಿಂದ ಮುಂದಿನ ಆದೇಶದವರೆಗೆ ದ.ಕ. ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿ ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ಆದೇಶ ಹೊರಡಿಸಿದ್ದಾರೆ.
ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಅವರ ಮನೆಗೆ ಹಾಗೂ ಇತರ ಕಡೆಗಳಿಗೆ ಪ್ರಮೋದ್ ಮುತಾಲಿಕ್ ಅವರು ಭೇಟಿ ನೀಡುತ್ತಿರುವುದಾಗಿ ಮಾಹಿತಿ ಬಂದಿದೆ. ಆದರೆ ಈ ಹಿಂದೆ ಅವರು ಭೇಟಿ ನೀಡಿದ ಸ್ಥಳಗಳಲ್ಲಿ ಉದ್ರೇಕಕಾರಿ ಭಾಷಣ ಮಾಡಿ ಹಿಂದೂ ಸಮುದಾಯದ ಜನರ ಕೋಮು ಭಾವನೆ ಕೆರಳಿಸಿರುವ ಮತ್ತು ಕೋಮ ಸೌಹಾರ್ದ ಹದಗೆಡಿಸಿದ ಪ್ರಕರಣಗಳಿರುವುದರಿಂದ ದ.ಕ. ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಗೆ ಪ್ರವೇಶಿಸಿದ್ದಲ್ಲಿ ಉದ್ರೇಕಕಾರಿ ಹೇಳಿಕೆ ನೀಡಿದ್ದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಕೋಮು ಸೌಹಾರ್ದಕ್ಕೆ ಭಂಗವುಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅವರಿಗೆ ದ.ಕ. ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯೊಳಗೆ ಪ್ರವೇಶ ನಿರ್ಬಂಧಿಸುವಂತೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಕೋರಿದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.
ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ, ಸುಳ್ಯ ತಾಲೂಕುಗಳಲ್ಲಿ ಜುಲೈ 28 ರಿಂದ ಮುಂದಿನ ಆದೇಶದವರೆಗೆ ಪ್ರಮೋದ್ ಮುತಾಲಿಕ್ ಅವರಿಗೆ ಪ್ರವೇಶ ನಿರ್ಬಂಧಿಸಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.