ಬಿಜೆಪಿ ಯುವನಾಯಕರ ಆಕ್ರೋಶ ಮುಸ್ಲಿಂ ಗೂಂಡಾಗಳ ವಿರುದ್ಧ ತಿರುಗಬೇಕು- ಕೆ.ಎಸ್.ಈಶ್ವರಪ್ಪ
ಚಿತ್ರದುರ್ಗ ಜು.28: ನೋವಿನ ಸಂದರ್ಭದಲ್ಲಿ ಪಕ್ಷದ ವಿರುದ್ಧ ತಿರುಗಿಬೀಳುವುದು ಸರಿಯಲ್ಲ. ಪ್ರವೀಣ್ ನೆಟ್ಟಾರು ಕೊಲೆಯಿಂದ ಹತಾಶೆಗೊಂಡು ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿರುವ ಬಿಜೆಪಿ ಯುವ ನಾಯಕರ ಸಿಟ್ಟು, ಆಕ್ರೋಶ ಮುಸ್ಲಿಂ ಗೂಂಡಾಗಳ ವಿರುದ್ಧ ತಿರುಗಬೇಕು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಕಾರ್ಯಕರ್ತರು ರಾಜಿನಾಮೆ ನೀಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೈದ್ದಾಂತಿಕ ವೈಷಮ್ಯಕ್ಕೆ ಕಾರ್ಯಕರ್ತರನ್ನು ಕಳೆದುಕೊಳ್ಳುತ್ತಿರುವುದಕ್ಕೆ ಪಕ್ಷದ ನಾಯಕರು ಬೇಸರದಲ್ಲಿದ್ದಾರೆ.
ನೋವಿನ ಸಂದರ್ಭದಲ್ಲಿ ಪಕ್ಷದ ವಿರುದ್ಧ ತಿರುಗಿ ಬೀಳುವುದು ಸರಿಯಲ್ಲ. ಪಕ್ಷವನ್ನು ದುರ್ಬಲ ಗೊಳಿಸುವ ಉದ್ದೇಶದಿಂದಲೇ ಇಂತಹ ಕೊಲೆಗಳು ನಡೆಯುತ್ತಿವೆ. ಪಕ್ಷದ ಸಿದ್ಧಾಂತ, ವಿಚಾರಗಳಲ್ಲಿ ಪ್ರಬುದ್ಧತೆ ಹೊಂದದವರು ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ’ ಎಂದು ಹೇಳಿದರು.
‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಂಘಪರಿವಾರದ ಹಲವರ ಹತ್ಯೆಯಾಯಿತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಡಿಮೆ ಸಂಖ್ಯೆಯ ಕಾರ್ಯಕರ್ತರು ಕೊಲೆಯಾಗಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಕಾರ್ಯಕರ್ತರ ಕೊಲೆಗಳನ್ನು ತಡೆಯಲು ಸಾಧ್ಯವಾಗದಿರುವುದಕ್ಕೆ ಬೇಸರವಿದೆ. ಇನ್ನು ಮುಂದೆ ಒಬ್ಬ ಕಾರ್ಯಕರ್ತ ಕೂಡ ಹೀಗೆ ಬಲಿಯಾಗಬಾರದು. ಸೈದ್ಧಾಂತಿಕ ವೈಷಮ್ಯದ ಕೊಲೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಠಿಣ ಕಾನೂನು ರೂಪಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ಇದಕ್ಕೆ ಗೃಹ ಸಚಿವರನ್ನು ಹೊಣೆ ಮಾಡಲಾಗದು.
‘ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಮುಸ್ಲಿಂ ಗೂಂಡಾಗಳು ಹಾಳು ಮಾಡುತ್ತಿದ್ದಾರೆ. ಎಲ್ಲ ಮುಸ್ಲಿಮರೂ ಇಂತಹ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಸಾರ್ವತ್ರಿಕವಾಗಿ ಹೇಳುವುದಿಲ್ಲ. ಕೆಲ ಮುಸ್ಲಿಂ ಗೂಂಡಾಗಳ ಮನಸ್ಥಿತಿ ಬದಲಾದಂತೆ ಕಾಣುತ್ತಿಲ್ಲ. ಮುಸ್ಲಿಂ ಸಮುದಾಯದ ಹಿರಿಯರು ಇಂಥವರಿಗೆ ಬುದ್ಧಿವಾದ ಹೇಳಬೇಕು. ಹಿಂದೂಗಳ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬಾರದು. ಹಿಂದೂಗಳು ತಿರುಗಿಬಿದ್ದರೆ ರಕ್ತ ಹರಿಯುತ್ತದೆ’ ಎಂದು ಎಚ್ಚರಿಕೆ ನೀಡಿದರು.
‘ಕಾನೂನು, ಸುವ್ಯವಸ್ಥೆ ಬಿಗಿಯಾಗಿದ್ದರೆ ಇಂತಹ ಕೊಲೆಯೇ ನಡೆಯುತ್ತಿರಲಿಲ್ಲ. ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರನ್ನು ಮುಟ್ಟಲು ಉತ್ತರ ಪ್ರದೇಶದಲ್ಲಿ ಹೆದರುತ್ತಾರೆ. ಹಿಂದೂ ಸಮಾಜದ ತಂಟೆಗೆ ಬಂದರೆ ಕುಟುಂಬವನ್ನು ಸರ್ವನಾಶ ಮಾಡಲಾಗುವುದು ಎಂಬ ಭಯ ಸೃಷ್ಟಿಸಬೇಕು. ಈ ನಿಟ್ಟಿನಲ್ಲಿ ಕಾನೂನು ರೂಪಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರಲ್ಲಿ ಮನವಿ ಮಾಡಿಕೊಂಡರು.
ಕೊಲೆಗೆ ಕಾರಣರಾದ ಮುಸ್ಲಿಂ ಗೂಂಡಾಗಳ ಬಗ್ಗೆ ನೇರವಾಗಿ ಮಾತನಾಡದ ಕಾಂಗ್ರೆಸ್, ಸಮಾಜದಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದ ಅವರು,
ಕೊಲೆ ಆರೋಪಿಗಳ ಧರ್ಮವನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನೇರವಾಗಿ ಹೇಳುತ್ತಿಲ್ಲ. ಅಧಿಕಾರದಲ್ಲಿದ್ದ ಅವಧಿಯಲ್ಲಿ ಕೊಲೆಗಡುಕರ ಪರವಾಗಿ ನಿಂತಿದ್ದವರು ಈ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕೆ ಬಿಜೆಪಿ ಕಾರ್ಯಕರ್ತರು ಅವಕಾಶ ಮಾಡಿಕೊಡಬಾರದು’ ಎಂದು ಸಲಹೆ ನೀಡಿದರು ಹೇಳಿದರು.
‘ಚುನಾವಣೆಗೆ ಎಂಟು ತಿಂಗಳು ಇರುವಾಗಲೇ ಮುಖ್ಯಮಂತ್ರಿ ಗಾದಿಗೆ ಕಾಂಗ್ರೆಸ್ ನಾಯಕರು ಕಿತ್ತಾಡುತ್ತಿದ್ದಾರೆ. ಬ್ರೋಕರ್ ಜಮೀರ್ ಅವರನ್ನು ಬೆನ್ನಿಗೆ ಇಟ್ಟುಕೊಂಡ ಸಿದ್ದರಾಮಯ್ಯ ತಿರುಗಾಡುತ್ತಿದ್ದಾರೆ. ರಾಜಕಾರಣಕ್ಕೆ ಜಾತಿಯ ಲೇಪನ ಮಾಡಿದವರಿಗೆ ಸರ್ಕಾರವನ್ನು ಟೀಕಿಸುವ ಅರ್ಹತೆ ಇಲ್ಲ. ಭ್ರಷ್ಟಚಾರದ ಬಗ್ಗೆ ಮಾತನಾಡುವ ನೈತಿಕತೆ ಯನ್ನು ಕಾಂಗ್ರೆಸ್ ಉಳಿಸಿಕೊಂಡಿಲ್ಲ’ ಎಂದು ತಿರುಗೇಟು ನೀಡಿದರು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಮುಖಂಡ ಸಿದ್ದೇಶ್ ಯಾದವ್, ಮಲ್ಲಿಕಾರ್ಜುನ್ ಇದ್ದರು.