ಮನೆ ಕಟ್ಟಲು ಸಮತಟ್ಟು ಮಾಡಿದ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡಬೇಕಾಗಿ ಬಂತಲ್ಲ…

ಸುಳ್ಯ ಜು.28 : ಕಿಡಿಗೇಡಿಗಳಿಂದ ಬರ್ಬರವಾಗಿ ಕೊಲೆಯಾದ ಪ್ರವೀಣ್ ನೆಟ್ಟಾರು ಅವರ ತಾಯಿ ರತ್ನಾವತಿ ಅವರು ಮಗನನ್ನು ಕಳೆದುಕೊಂಡ ನೋವನ್ನು ಮಾಧ್ಯಮದ ಮುಂದೆ ತೋಡಿಕೊಂಡಿದ್ದು, ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.

‘ನನಗೆ ಇನ್ನು ಯಾರಿದ್ದಾರೆ. ಇದ್ದ ಒಬ್ಬನೇ ಮಗನನ್ನು ಕೊಂದೇ ಬಿಟ್ಟರು. ಅವರಿಗೆ ಗಲ್ಲು ಶಿಕ್ಷೆನೇ ಆಗಬೇಕು’ ಎಂದು ಕಣ್ಣೀರಿಟ್ಟಿದ್ದಾರೆ. ತನ್ನ ಸಂಸಾರಕ್ಕೆ ನೆಮ್ಮದಿ ಜೀವನ ನೀಡಬೇಕು ಎಂಬ ತುಡಿತದೊಂದಿಗೆ ನೆಟ್ಟಾರಿನಲ್ಲಿ ಸ್ವಲ್ಪ ಜಾಗದಲ್ಲಿ ಮನೆ ಕಟ್ಟುವ ಕನಸು ಕಂಡಿದ್ದ ಪ್ರವೀಣ್ ಅದಕ್ಕಾಗಿ ಒಂದು ಕೊಳವೆ ಬಾವಿ ಕೊರೆಯಿಸಿದ್ದರು.’ಮನೆ ಕಟ್ಟಲು ಜಾಗವನ್ನೂ ಸಮತಟ್ಟು ಕೂಡಾ ಮಾಡಿಟ್ಟಿದ್ದ, ಆದರೆ ಅದೇ ಜಾಗದಲ್ಲಿ ಅವನ ಅಂತ್ಯ ಸಂಸ್ಕಾರ ಮಾಡಬೇಕಾಗಿ ಬಂತಲ್ಲ’ ಎಂದು ಪ್ರವೀಣ್ ಅವರ ಸಂಬಂಧಿಕರೊಬ್ಬರು ಕಣ್ಣೀರಿಟ್ಟರು.

ಪ್ರವೀಣ್ ಅವರಿಗೆ ರಾಜಕೀಯ ಮಹತ್ವಾಕಾಂಕ್ಷೆಗಳೇನೂ ಇರಲಿಲ್ಲ. ಪಿಯುಸಿ ವರೆಗೆ ಶಿಕ್ಷಣ ಪಡೆದಿದ್ದ ಅವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಇದ ರಿಂದಾಗಿಯೇ ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ನಂಟು ಬೆಳೆದಿತ್ತು ಎನ್ನುತ್ತಾರೆ ಅವರ ಒಡನಾಡಿಗಳು.

ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಪ್ರವೀಣ್ ಅವರು ಜೀವನ ನಿರ್ವಹಣೆಗಾಗಿ ಕೆಲವು ತಿಂಗಳ ಹಿಂದೆ ಬೆಳ್ಳಾರೆಯಲ್ಲಿ ಕೋಳಿ ಮಾಂಸ ಮಾರಾಟ ಅಂಗಡಿ ಆರಂಭಿಸಿದ್ದರು. ಮಾತ್ರವಲ್ಲದೆ ಅವರು ಸಮಾಜಸೇವೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದರು. ಬಿಲ್ಲವ ಸಮುದಾಯದ ಯುವ ನಾಯಕನಾಗಿ ಮೂಡಿಬಂದಿದ್ದ ಪ್ರವೀಣ್ ಅವರ ಸಮುದಾಯ ಸೇವೆಗಳನ್ನು ಗುರುತಿಸಿ ಬಿಜೆಪಿ ಅವರಿಗೆ ಯುವಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ನೇಮಿಸಿತ್ತು. ಬಿಲ್ಲವರ ಸಂಘಟನೆಯಾಗಿರುವ ಯುವ ವಾಹಿನಿಯ ಸುಳ್ಯ ತಾಲ್ಲೂಕು ಘಟಕದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ತುಳುವರ ಆರಾಧ್ಯ ದೈವಗಳಾದ ಕೋಟಿ ಚೆನ್ನಯರ ಮೂಲಸ್ಥಾನವಾದ ಗೆಜ್ಜೆಗಿರಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಯ ಸಹಸಂಚಾಲಕರಾಗಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಸಾದ ವಿತರಣೆಯ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಂಡು ಯಶಸ್ವಿಯಾಗಿ ನಿರ್ವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!