ಅದಾನಿ ಗ್ರೂಪ್ ಗೆ ದೇಶದ 3 ವಿಮಾನ ನಿಲ್ದಾಣ ಗುತ್ತಿಗೆ: ಕೇಂದ್ರ ಸಂಪುಟ ಒಪ್ಪಿಗೆ
ನವದೆಹಲಿ: ಸಾರ್ವಜನಿಕ ಖಾಸಗಿ ಸಹಭಾಗಿತ್ವದ(ಪಿಪಿಪಿ) ಮೂಲಕ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದ ಜೈಪುರ, ಗುವಾಹಟಿ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳನ್ನು ಗುತ್ತಿಗೆ ನೀಡುವ ಪ್ರಸ್ತಾಪಕ್ಕೆ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್, ನಾಗರಿಕ ವಿಮಾನಯಾನ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮೂರು ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮತ್ತು ಎಎಐ ಮೂಲಕ ಗುತ್ತಿಗೆಗೆ ನೀಡಲು ಅನುಮೋದಿಸಿದೆ. ಇದರಿಂದ ಸುಮಾರು 1,070 ಕೋಟಿ ರೂ.ಗಳಿಕೆಯೇ ಅಲ್ಲದೆ, ಪ್ರಯಾಣಿಕರಿಗೆ ಲಭ್ಯವಿರುವ ಸೌಲಭ್ಯಗಳು ಸುಧಾರಿಸುತ್ತದೆ ಎಂದರು.
ಸಾರ್ವಜನಿಕ ವಿಮಾನಯಾನ(ಪಿಪಿಪಿ) ಆಧಾರದ ಮೇಲೆ ಗುತ್ತಿಗೆಗೆ ಈ ವಿಮಾನ ನಿಲ್ದಾಣಗಳನ್ನು ನಿರ್ವಹಿಸುವ ಮತ್ತು ಅಭಿವೃದ್ಧಿಪಡಿಸುವ ಹಕ್ಕನ್ನು ಖಾಸಗಿ ಕಂಪನಿಗಳಿಗೆ ವಹಿಸಲಾಗುವುದು. 50 ವರ್ಷಗಳ ಗುತ್ತಿಗೆ ನೀಡಲಾಗುವುದು ಎಂದು ಜಾವಡೇಕರ್ ಮಾಹಿತಿ ನೀಡಿದರು. ಪ್ರಸ್ತುತ, ಈ ಮೂರು ವಿಮಾನ ನಿಲ್ದಾಣಗಳನ್ನು ಎಎಐ ನಿರ್ವಹಿಸುತ್ತಿದೆ.
ಜೈಪುರ, ಗುವಾಹಟಿ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳನ್ನು ಗುತ್ತಿಗೆಯನ್ನು ಅದಾನಿ ಗ್ರೂಪ್ ಗೆ ನೀಡಲಾಗಿದೆ.