ಕೋಟ: ಹಿಂಸಾತ್ಮಕ ಜಾನುವಾರು ಸಾಗಾಟ- ಇಬ್ಬರು ವಶಕ್ಕೆ
ಕೋಟ ಜು.27 (ಉಡುಪಿ ಟೈಮ್ಸ್ ವರದಿ): ಹಿಂಸಾತ್ಮಕವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನವನ್ನು ತಡೆದ ಕೋಟ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬ್ರಹ್ಮಾವರ ತಾಲೂಕಿನ ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಬಿದ್ಕಲ್ ಕಟ್ಟೆ ನಿವಾಸಿ ಸಿಬಿ ಜೋಸೆಪ್ (45), ಗಾವಳಿಬೈಲು ನಿವಾಸಿ ಕರುಣಾಕರ (50) ಪೊಲೀಸರು ವಶಕ್ಕೆ ಪಡೆದವರು. ಇಂದು ಬೆಳಿಗ್ಗೆ ಕೋಟ ಠಾಣೆಯ ಪಿ.ಎಸ್.ಐ ಮಧು ಬಿ.ಇ ಅವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿ ಇದ್ದ ವೇಳೆ ಬಿದ್ಕಲ್ ಕಟ್ಟೆಯಿಂದ ಸಾಯಿಬ್ರ ಕಟ್ಟೆ ಕಡೆಗೆ ಬರುತ್ತಿದ್ದ ತೆರೆದ ಪಿಕಪ್ ವಾಹನದಲ್ಲಿ ಜಾನುವಾರುಗಳನ್ನು ತುಂಬಿಸಿಕೊಂಡು ಬರುವುದನ್ನು ಕಂಡು ಅನುಮಾನಗೊಂಡು ಪರಿಶೀಲಿಸಿದಾಗ 3 ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ವಾಹನದಲ್ಲಿ ಇದ್ದ ಇಬ್ಬರನ್ನು ವಿಚಾರಿಸಿದಾಗ ಅವರು, ತೋಟಕ್ಕೆ ದನದ ಗೊಬ್ಬರಕ್ಕಾಗಿ ತನ್ನ ಸ್ನೇಹಿತ ಕೊರ್ಗಿ ವಾಸಿ ಶೈಜು ಎಂಬಾತನಿಂದ ಒಂದು ದನ ಮತ್ತು ಒಂದು ಹೆಣ್ಣು ಕರು ಹಾಗೂ ಒಂದು ಗಂಡು ಕರುವನ್ನು ಸಾಕುವ ಉದ್ದೇಶದಿಂದ ತೆಗೆದುಕೊಂಡು ಬರುತ್ತಿರುವುದಾಗಿ ತಿಳಿಸಿರುತ್ತಾರೆ.
ಈ ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದ ಕಾರಣ ಮಹಜರು ಮುಖೇನ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಂಡು ಇಬ್ಬರ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.