ಕಸ್ತೂರಿ ರಂಗನ್ ವರದಿಯ ಆತಂಕ ಪರಿಹಾರಕ್ಕೆ ಕೇರಳ ಮಾದರಿಯ ಭೌತಿಕ ಸಮೀಕ್ಷೆ ಒಂದೇ ದಾರಿ -ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ

ಉಡುಪಿ ಜು.27 (ಉಡುಪಿ ಟೈಮ್ಸ್ ವರದಿ): ಕಸ್ತೂರಿ ರಂಗನ್ ವರದಿಯ ಆತಂಕ ಪರಿಹಾರಕ್ಕೆ ಕೇರಳ ಮಾದರಿಯ ಭೌತಿಕ ಸಮೀಕ್ಷೆ ಒಂದೇ ದಾರಿ ಎಂದು ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಅಭಿಪ್ರಾಯ ಪಟ್ಟಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಅವರು, ಪಶ್ಚಿಮ ಘಟ್ಟದ ಸಂರಕ್ಷಣೆಯ ಉದ್ದೇಶದಿಂದ ಕಸ್ತೂರಿ ರಂಗನ್‍ ರವರ ನೇತೃತ್ವದ ಉನ್ನತಮಟ್ಟದ ಸಮಿತಿ ನೀಡಿರುವ ವರದಿಯನ್ನು ಕಾರ್ಯಗತಗೊಳಿಸುವಂತೆ ಸುಪ್ರೀಂ ಕೋರ್ಟ್‍ನ ಹಸಿರು ಪೀಠ ಕೇಂದ್ರ ಸರಕಾರಕ್ಕೆ ನಿರಂತರವಾಗಿ ಒತ್ತಡವನ್ನು ಹೇರುತ್ತಲೇ ಬಂದಿದೆ.

ಈ ಕಾರಣಕ್ಕೆ ಜು.9 ರಂದು 4ನೇ ಬಾರಿಗೆ ಗಜೆಟ್ ಪ್ರಕಟಣೆಯನ್ನು ಹೊರಡಿಸಿರುವ ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಈ ಬಗ್ಗೆ ಜನರು ಮತ್ತು ಸರಕಾರಗಳು ತಮ್ಮ ಅಭಿಪ್ರಾಯ ಅಥವಾ ಆಕ್ಷೇಪಗಳಿದ್ದಲ್ಲಿ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಿದೆ. ಅದು ಸೆ.3 ಕ್ಕೆ ಅಂತ್ಯಗೊಳ್ಳಲಿದೆ. ಆದರೆ ಈ ವಿಚಾರದಲ್ಲಿ ಕೊನೆಗೂ ಎಚ್ಚೆತ್ತ ರಾಜ್ಯ ಸರಕಾರಗಳು ಹಾಗೂ ಈ ಭಾಗದ ಸಂಸದರುಗಳ ಒತ್ತಡಕ್ಕೆ ಮಣಿದ ಸಚಿವಾಲಯ, ವಾಸ್ತವ ಪರಿಸ್ಥಿತಿಯ ಅಧ್ಯಯನಕ್ಕೆ ಉನ್ನತಮಟ್ಟದ ಸಮಿತಿಯನ್ನು ರಚಿಸಿ, ಸಂತ್ರಸ್ಥ ರಾಜ್ಯದ ಸರಕಾರಗಳೊಂದಿಗೆ ಸಮಾಲೋಚಿಸಿ, ಜನವಸತಿ ಪ್ರದೇಶ, ರೈತರೇ ಅಭಿವೃದ್ಧಿಪಡಿಸಿದ ಹಸಿರು ತೋಟಗಳನ್ನು ಹೊರಗಿಟ್ಟು, ಹೇರಬೇಕಾದ ನಿರ್ಭಂಧ-ನಿಯಂತ್ರಣಗಳ ಬಗ್ಗೆ  ಚರ್ಚಿಸಿ, ವರದಿ ನೀಡುವಂತೆ ಆದೇಶಿಸಿ, ಒಂದು ವರ್ಷದ ಸಮಯಾವಕಾಶ ನೀಡಿದೆ ಎಂಬ ವಿಚಾರ ಜನರ ಆತಂಕವನ್ನು ಸ್ವಲ್ಪ ಮಟ್ಟಿಗೆ ದೂರ ಮಾಡಿದೆ.

ಆದರೆ ಹಿಂದಿನ ಬಾರಿ ಇದೇ ರೀತಿ ಗಜೆಟ್ ಪ್ರಕಟಣೆ ಹೊರಡಿಸಿದಾಗಲೂ ರಾಜ್ಯ ಸರಕಾರ ನಾವು ಕೇರಳ ರಾಜ್ಯಕ್ಕಿಂತಲೂ ಉತ್ತಮ ವರಧಿ ನೀಡುವುದಾಗಿ ಕೊಚ್ಚಿಕೊಂಡು, ಮಂತ್ರಿಗಳ ನೇತೃತ್ವದ ಸದನ ಸಮಿತಿ ರಚಿಸಿ, ಈ ವರದಿಯಲ್ಲಿ ತಿಳಿಸಲಾದ ಗ್ರಾಮಗಳ ವ್ಯಾಪ್ತಿಯಲ್ಲಿ ಅರ್ಧ-ಒಂದು ಗಂಟೆಯ ಸಭೆ ನಡೆಸಿ, “ಪ್ರತೀ ಗ್ರಾಮದಲ್ಲೂ ವರದಿಗೆ ಜನರ ವಿರೋಧವಿರುವುದರಿಂದ ಕೈ ಬಿಡುವಂತೆ ಶಿಫಾರಸ್ಸು ಮಾಡುತ್ತೇವೆ” ಎಂದು ಕೇವಲ ರಾಜಕೀಯ ಆಶ್ವಾಸನೆ ನೀಡಿ, ಸರಕಾರಕ್ಕೆ ‘ವರದಿ ಜಾರಿಗೆ ಜನರ ವಿರೋಧವಿದೆ’ ಎಂಬ ಒಂದೆರಡು ಪುಟಗಳ ಉತ್ತರ ನೀಡಿ ಕೈತೊಳೆದುಕೊಂಡಿತ್ತು.

ಹಾಗಿದ್ದರೂ ಸಹಾ ರಾಜ್ಯ ಸರಕಾರದ ಅಧಿಕಾರಿಗಳು ಕೇಂದ್ರಕ್ಕೆ ಪತ್ರ ಬರೆದು ವರದಿ ಜಾರಿಗೆ ಕರ್ನಾಟಕ ಸರ್ಕಾರದ ಒಪ್ಪಿಗೆ ಇದೆ ಎಂಬ ಉತ್ತರ ನೀಡಿರುವುದು ವಿಧಾನ ಸಭಾ ಕಲಾಪದಿಂದ ತಿಳಿದು ಬಂದಿದೆ. ಇದೇ ರೀತಿ ಇನ್ನೊಂದು ದೊಂಬರಾಟ ಇದಾಗದಿರಲಿ ಎಂದು ಸಂಘಟಣೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಆತಂಕ ವ್ಯಕ್ತಪಡಿಸಿದ್ದಾರೆ.ಕೇರಳ ಸರಕಾರ ಈ ವರದಿ ಅನಿಷ್ಠಾನದ ಬಗ್ಗೆ ಮೊದಲ ಗಜೆಟ್ ಪ್ರಕಟಣೆ ಹೊರಟಾಗಲೇ ಗ್ರಾಮ-ಗ್ರಾಮಗಳಲ್ಲಿ ಕಂದಾಯ, ಅರಣ್ಯ ಅಧಿಕಾರಿಗಳು, ಸ್ಥಳೀಯ ಜನ ಪ್ರತಿನಿಧಗಳು ಹಾಗೂ ಗ್ರಾಮಸ್ಥರು, ವಾರಗಳ ಕಾಲ ಗ್ರಾಮದ ನಕ್ಷೆಯನ್ನಿಟ್ಟುಕೊಂಡು, ಯಾವ ಯಾವ ಪ್ರದೇಶದಲ್ಲಿ ನೈಸರ್ಗಿಕ ಅರಣ್ಯವಿದೆ, ಯಾವ ಸರ್ವೆ ನಂಬ್ರಗಳಲ್ಲಿ ಜನವಸತಿ, ಕೃಷಿಕರೆ ಅಭಿವೃದ್ಧಿಪಡಿಸಿದ ತೋಟ ಗದ್ದೆ, ಅರಣ್ಯ ಕೃಷಿಗಳಿವೆ ಎಂಬುದನ್ನು ಗುರುತಿಸಿ, ಆ ಪ್ರದೇಶಗಳನ್ನು ಕೈ ಬಿಟ್ಟು ಉಳಿದ ಭೂ ಭಾಗವನ್ನು ಗುರುತಿಸಿ, ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಶಿಸುವಂತೆ ಸಲಹೆ ನೀಡಿದೆ.

ಆ ಕಾರಣಕ್ಕೆ ಕೇರಳದಲ್ಲಿ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಗುರುತಿಸಲಾಗಿದ್ದ 13,108 ಚದರ. ಕಿ.ಮೀ. ಗಳಲ್ಲಿ 3,110 ಚದರ. ಕಿ.ಮೀ. ಗಳನ್ನು ಕೈಬಿಟ್ಟು ಕೇವಲ 9,994 ಚದರ. ಕಿ.ಮೀ. ಗಳನ್ನು ಮಾತ್ರ ಉಳಿಸಿಕೊಂಡಿದೆ. ಇದರಲ್ಲಿ 9,107 ಚದರ. ಕಿ.ಮೀ. ಪ್ರದೇಶ ಸಂರಕ್ಷಿತ ಅರಣ್ಯ ಮತ್ತು ವನ್ಯ ಜೀವಿ ಅಭಯಾರಣ್ಯಗಳಾಗಿವೆ. ಹಾಗಿರುವಾಗ 20,668 ಚದರ. ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶ ಹೊಂದಿರುವ ಕರ್ನಾಟಕದಲ್ಲಿ ಸರಕಾರ ನಾವು ಕೇರಳಕ್ಕಿಂತ ಉನ್ನತ ಮಟ್ಟದ ವರದಿ ನೀಡುತ್ತೇವೆ ಎಂದು ಬಡಾಯಿ ಕೊಚ್ಚಿಕೊಂಡು ಜನರನ್ನು ನಿರಂತರ ಆತಂಕದಲ್ಲಿಡುತ್ತಿರುವುದಾದರೂ ಏಕೆ? ಕೇರಳದ ಮಾದರಿ ಅನುಸರಿಸಿದರೆ ಸರಕಾರದ ಮರ್ಯಾದೆಗೆ ಕುಂದಾಗುವುದಾದರೂ ಏನು ಎಂದು ಸಂಘಟನೆ ಪ್ರಶ್ನಿಸಿದೆ.

Leave a Reply

Your email address will not be published. Required fields are marked *

error: Content is protected !!