ಪ್ರವೀಣ್ ಹತ್ಯೆ ಖಂಡಿಸಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಹಿತ 9 ಪದಾಧಿಕಾರಿಗಳ ರಾಜೀನಾಮೆ

ಚಿಕ್ಕಮಗಳೂರು ಜು.27: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪ್ರವೀಣ್ ನೆಟ್ಟಾರು ಹಂತಕರನ್ನು ಬಂಧಿಸಿ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂದೀಪ್ ಹರಿವಿನಗಂಡಿ ಸಹಿತ ಪದಾಧಿಕಾರಿಗಳು ಹಾಗೂ ಜಿಲ್ಲೆಯ 9 ಮಂಡಲಗಳ ಅಧ್ಯಕ್ಷರು ಇಂದು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂದೀಪ್ ಹರಿವಿನಗಂಡಿ ಅವರು, ಪ್ರವೀಣ್ ಸಾವು ಹಿಂದೂ ಸಮಾಜಕ್ಕೆ ತುಂಬಲಾರದ ನಷ್ಟ. ರಾತ್ರಿ ಸಮಯದಲ್ಲಿ ಹಿಂದಿನಿಂದ ಬಂದು ಹೊಡೆದಿರುವುದು ಹೇಡಿಗಳ ಕೃತ್ಯವಾಗಿದೆ. ಬಿಜೆಪಿ ಯುವ ಮೋರ್ಚಾದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ತೊಡಗಿಸಿ ಕೊಂಡಿದ್ದ ಹುಡುಗ ಸಮಾಜಕ್ಕಾಗಿ ಪ್ರಾಣ ತೆತ್ತಿರುವುದು ದುರ್ದೈವದ ಸಂಗತಿ. ಆರೋಪಿಗಳನ್ನು ಬಂಧಿಸಿ ಉಗ್ರ ಶಿಕ್ಷೆ ವಿಧಿಸಬೇಕು. ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು.

ಹಿಂದೆ ನಡೆದ ಕೊಲೆಗಳಿಗೆ ಯಾವ ರೀತಿ ನ್ಯಾಯ ಸಿಕ್ಕಿದೆ ಎನ್ನುವುದು ನಮ್ಮ ಕಣ್ಣ ಮುಂದಿದೆ. ಕಠಿಣ ಕ್ರಮ ಎನ್ನುವುದು ಭರವಸೆಯಾಗೇ ಉಳಿದಿದೆ. ಹೀಗಾಗಿ ಜಿಲ್ಲಾ ಯುವ ಮೋರ್ಚಾ ಎಲ್ಲಾ ಪದಾಧಿಕಾರಿಗಳು, 9 ಮಂಡಲಗಳ ಅಧ್ಯಕ್ಷರು ಪಕ್ಷದ ಜವಾಬ್ದಾರಿಗೆ ರಾಜೀನಾಮೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!