ಕೊಲೆಗಡುಕರ ಪಕ್ಷ, ಜಾತಿ, ಧರ್ಮ ಲೆಕ್ಕಿಸದೆ ಕ್ರಮಕೈಗೊಳ್ಳಬೇಕು- ಸಿದ್ದರಾಮಯ್ಯ

ಮಂಗಳೂರು, ಜು.27: ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆಯನ್ನು ಮಾಜಿ ಮುಖ್ಯಮಂತ್ರಿ, ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಖಂಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಬಜರಂಗದಳದ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ ಖಂಡನೀಯ. ಪೊಲೀಸರು ತಕ್ಷಣ ಕೊಲೆಗಡುಕರನ್ನು ಬಂಧಿಸಿ ಊಹಾಪೊಹಗಳಿಂದ ಶಾಂತಿ-ಸುವ್ಯವಸ್ಥೆ ಕದಡುವುದನ್ನು ತಪ್ಪಿಸಬೇಕು. ಕೊಲೆಗಡುಕರ ಪಕ್ಷ, ಜಾತಿ, ಧರ್ಮವನ್ನು ಲೆಕ್ಕಿಸದೆ ಪೊಲೀಸರು ಮುಲಾಜಿಲ್ಲದೆ ಕ್ರಮಕೈಗೊಳ್ಳಬೇಕು.” ಎಂದು ಆಗ್ರಹಿಸಿದ್ದಾರೆ.

ಇನ್ನು ಪ್ರವೀಣ್ ನೆಟ್ಟಾರು ಅವರ ಹತ್ಯೆ ಯನ್ನು ಶಾಸಕ, ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಅವರು ಖಂಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಶೀಘ್ರ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಹಾಗೂ ಇತ್ತೀಚೆಗೆ ಸಮಾಜಘಾತುಕ ಶಕ್ತಿಗಳು, ಕೊಲೆಗಡುಕರಿಗೆ ಸರಕಾರದ ಭಯವಿಲ್ಲ ಎಂಬುದು ಕೆಲವು ದಿನಗಳಲ್ಲಿ ಸಂಭವಿಸಿದ ಘಟನೆಗಳೇ ಸಾಕ್ಷಿ. ಈ ಸರಕಾರದಲ್ಲಿ ಜನಸಾಮಾನ್ಯರಿಗೂ ರಕ್ಷಣೆ, ನೆಮ್ಮದಿಯ ವಾತಾವರಣ ಇಲ್ಲವಾಗಿದೆ. ಬೆಳ್ಳಾರೆ ಗ್ರಾಮದಲ್ಲಿ ಕಳೆದ ನಾಲ್ಕೈದು ದಿನಗಳ ಅವಧಿಯಲ್ಲಿ ಮಸೂದ್ ಮತ್ತು ಪ್ರವೀಣ್ ಎಂಬ ಇಬ್ಬರು ಯುವಕರ ಹತ್ಯೆಯಾಗಿದ್ದು ಅತ್ಯಂತ ನೋವಿನ ವಿಚಾರ. ಈ ಎಲ್ಲಾ ಘಟನೆಗಳನ್ನು ಬೇಧಿಸುವುದರ ಮೂಲಕ ನೈಜ ಅಪರಾಧಿಗಳನ್ನು ಆದಷ್ಟು ಬೇಗನೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಹತ್ಯೆಯಾದ ಮಸೂದ್ ಮತ್ತು ಪ್ರವೀಣ್ ಅವರ ಕುಟುಂಬಕ್ಕೆ ಗರಿಷ್ಠ ಮೊತ್ತದ ಪರಿಹಾರ ನೀಡಬೇಕೆಂದು ಗೃಹ ಸಚಿವ ಹಾಗೂ ಮುಖ್ಯಮಂತ್ರಿಯನ್ನು ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.

ಜೊತೆಗೆ ಸಮಾಜಘಾತುಕ ಶಕ್ತಿಗಳ, ಕೊಲೆಗಡುಕರ ವಿರುದ್ಧ ಹೋರಾಡಲು ಎಲ್ಲಾ ಜಾತಿ, ಮತ, ವರ್ಗದವರು ಒಂದಾಗಿ ಒಟ್ಟಾಗಿ ಮುಂದಾಗಬೇಕು ಮತ್ತು ಇಂತಹ ಕೃತ್ಯ ನಡೆಸಿದವರನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!