ಸುಳ್ಯ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ- ಐವರು ವಶಕ್ಕೆ
ಮಂಗಳೂರು, ಜು.27: ಬೆಳ್ಳಾರೆಯಲ್ಲಿ ನಿನ್ನೆ ರಾತ್ರಿ ನಡೆದ ಪ್ರವೀಣ್ ನೆಟ್ಟಾರು ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಐವರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಐವರನ್ನು ವಶಕ್ಕೆ ಪಡೆದು ಪೊಲೀರು ತೀವ್ರ ವಿಚಾರಣೆ ನಡೆಸುತ್ತಿದ್ದು, ಕೊಲೆ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಕೊಲೆ ಯಾಕಾಗಿ ನಡೆಯಿತು, ಯಾರು ನಡೆಸಿದರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಪತಿಯನ್ನು ಕಳೆದುಕೊಂಡ ನೋವನ್ನು ಮಾಧ್ಯಮದ ಜೊತೆಗೆ ಹಂಚಿಕೊಂಡ ಪ್ರವೀಣ್ ಅವರ ಪತ್ನಿ ನೂತನಾ ಅವರು, ನನ್ನ ಗಂಡ ಸಮಾಜಕ್ಕಾಗಿ ತುಂಬಾ ದುಡಿದಿದ್ದಾರೆ. ಆದರೆ ಅವರನ್ನು ಉಳಿಸಿಕೊಳ್ಳಲು ಯಾರಿಂದಲೂ ಸಾಧ್ಯ ಆಗಿಲ್ಲ. ನನ್ನ ಗಂಡನಿಗೆ ಬಂದ ಪರಿಸ್ಥಿತಿ ಇನ್ಯಾರಿಗೂ ಬರುವುದು ಬೇಡ ಅಂತಹ ಕ್ರಮ ಕೈಗೊಳ್ಳಬೇಕು ಎಂದು ಕಣ್ಣೀರಿಟ್ಟಿದ್ದಾರೆ.
ಆರೋಪಿಗಳ ಪತ್ತೆಗಾಗಿ ಐದು ವಿಶೇಷ ತಂಡ: ಘಟನೆ ನಡೆದ ಬೆಳ್ಳಾರೆಗೆ ಭೇಟಿ ನೀಡಿದ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ ಪರಿಸ್ಥಿತಿಯ ಅವಲೋಕನ ನಡೆಸಿ, ಬಂದೋಬಸ್ತ್ ವ್ಯವಸ್ಥೆಯನ್ನು ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳ ಪತ್ತೆಗಾಗಿ ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ. ಆರೋಪಿಗಳ ಜಾಡು ಹಿಡಿದು ಮೂರು ತಂಡಗಳು ಈಗಾಗಲೇ ಕೇರಳ, ಮಡಿಕೇರಿ, ಹಾಸನಕ್ಕೆ ತೆರಳಿವೆ. ಕೇರಳ ಗಡಿ ಪ್ರದೇಶ ಹಾಗೂ ಪುತ್ತೂರಿನ ಸುತ್ತಮುತ್ತ ನಾಕಾಬಂದಿ ಹಾಕಿ ವಾಹನಗಳನ್ನು ಶೋಧ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ: ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಅವರ ಪುತ್ತೂರು ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಪ್ರವೀಣ್ ನೆಟ್ಟಾರು ಮೃತದೇಹವನ್ನು ಬೆಳಗ್ಗೆ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಪುತ್ತೂರಿನಿಂದ ಸವಣೂರು ನಿಂತಿಕಲ್ಲು ಮಾರ್ಗವಾಗಿ ಪ್ರವೀಣ್ ಪಾರ್ಥೀವ ಶರೀರವನ್ನು ಮೆರವಣಿಗೆ ಮೂಲಕ ಕರೆತರಲಾಗುತ್ತಿದ್ದು, ಹುಟ್ಟೂರು ನೆಟ್ಟಾರಿನಲ್ಲಿ ಅಂತ್ಯ ಸಂಸ್ಕಾರ ನಡೆಸಲು ತೀರ್ಮಾನಿಸಲಾಗಿದೆ. ಹತ್ಯೆಯನ್ನು ಖಂಡಿಸಿ ಪುತ್ತೂರು, ಸುಳ್ಯ, ಕಡಬ ತಾಲೂಕಿನಲ್ಲಿ ಸ್ವಯಂಪ್ರೇರಿತ ಬಂದ್‍ಗೆ ವಿಎಚ್‍ಪಿ, ಭಜರಂಗದಳ, ಹಿಂದೂ ಜಾಗರಣ ವೇದಿಕೆ ಕರೆ ನೀಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೆÇಲೀಸರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದಾರೆ.