ಪುತ್ತೂರು: ಬಸ್ ಗೆ ಕಲ್ಲು ತೂರಾಟ- ಸೆಕ್ಷನ್ 144 ಜಾರಿ
ಬೆಳ್ಳಾರೆ ಜು.27 : ನಿನ್ನೆ ರಾತ್ರಿ ನಡೆದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಬಳ್ಳಾರೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಘಟನೆ ಹಿನ್ನೆಲೆಯಲ್ಲಿ ಪುತ್ತೂರು, ಸುಳ್ಯ, ಕಡಬ ತಾಲೂಕಿನಲ್ಲಿ ಬಂದ್ ಗೆ ಕರೆ ನೀಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಬೆಳ್ಳಾರೆಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಬೆಳ್ಳಾರೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಕೆಲವು ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಇನ್ನು ಪ್ರವೀಣ್ ಕೊಲೆಯ ಹಿಂದೆ ಜು.19 ರಂದು ಬೆಳ್ಳಾರೆ ಸಮೀಪದ ಕಳಂಜೆಯಲ್ಲಿ ನಡೆದಿದ್ದ ಮಸೂದ್ ಮೇಲಿನ ಹಲ್ಲೆ ಹಾಗೂ ಹತ್ಯೆಯ ಸೇಡಿನ ಸಂಚು ಇದೆ ಎಂಬ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರ ವಿಶೇಷ ತಂಡ ರಚಿಸಲಾಗಿದೆ.
ಇದರೊಂದಿಗೆ ಕೊಲೆ ನಡೆಸಿದ ದುಷ್ಕರ್ಮಿಗಳು ಕೇರಳ ನೋಂದಣಿಯ ಬೈಕ್ ನಲ್ಲಿ ಬಂದಿರುವ ಮಾಹಿತಿಗಳು ಲಭ್ಯವಾದ ಹಿನ್ನೆಲೆಯಲ್ಲಿ ಆರೋಪಿಗಳು ಕೇರಳದಿಂದ ಬಂದಿರುವ ಶಂಕೆ ವ್ಯಕ್ತವಾಗಿದ್ದು, ಕೇರಳ ಹಾಗೂ ದ.ಕ ಗಡಿಯಲ್ಲಿ ನಾಕಾ ಬಂದಿ ಹಾಕಾಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಶೀಘ್ರ ಆರೋಪಿಗಳ ಬಂಧನದ ಭರವಸೆ ನೀಡಿದ್ದಾರೆ.
ಇನ್ನು ಪ್ರವೀಣ್ ಕೊಲೆ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ಬೋಳಾರುವಿನಲ್ಲಿ ಕಿಡಿಗೇಡಿಗಳು ಸರಕಾರಿ ಬಸ್ ವೊಂದಕ್ಕೆ ಕಲ್ಲು ತೂರಾಟ ನಡೆಸಿ ಗಾಜು ಪುಡಿಗೈದಿರುವ ಘಟನೆ ನಡೆದಿದೆ.