ಉಡುಪಿ: ಸಹಕಾರ ಸಂಘದ ಅವ್ಯವಹಾರದ ಸಾಕ್ಷಿ ಹೇಳಿದ ಅಧ್ಯಕ್ಷರಿಗೆ ಹಲ್ಲೆ
ಉಡುಪಿ: (ಉಡುಪಿ ಟೈಮ್ಸ್ ವರದಿ)ಸಹಕಾರ ಸಂಘದ ಅವ್ಯವಹಾರದ ಬಗ್ಗೆ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ ಅಧ್ಯಕ್ಷರಿಗೆ ಹಲ್ಲೆ ನಡೆಸಿದ ಘಟನೆ ಉದ್ಯಾವರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಘಟನೆ ವಿವರ: ಪಿತ್ರೋಡಿಯ ಮೀನುಗಾರಿಕಾ ಮತ್ತು ಮೀನೂ ಉತ್ಪನ್ನ ಸಾಮಾಗ್ರಿಗಳ ಸಹಕಾರ ಸಂಘದಲ್ಲಿ ನಡೆದ ಅವ್ಯಹಾರದ ಬಗ್ಗೆ ಮಂಗಳವಾರ ಕುಂದಾಪುರ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿಕೆ ನೀಡಿದ ಮಾಜಿ ಗ್ರಾಮ ಪಂಚಾಯತ್ ಸದಸ್ಯ, ಪ್ರಸ್ತುತ ಸಂಘದ ಅಧ್ಯಕ್ಷ ಗೀರೀಶ್ ವಿ. ಸುವರ್ಣ ಅವರಿಗೆ ಪಿತ್ರೋಡಿಯ ಸೊಸೈಟಿಯ ಬಳಿ ಹಲ್ಲೆ ಮಾಡಲಾಗಿದೆಂದು ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆ. 18 ರಂದು ಕುಂದಾಪುರ ನ್ಯಾಯಾಲಯಕ್ಕೆ ಗೀರೀಶ್ ವಿ ಸುವರ್ಣ ಮತ್ತು ಸಂಘದ ನಿರ್ದೇಶಕ ಗಂಗಾಧರ ಕರ್ಕೆರ ಈ ಹಿಂದಿನ ಅಧ್ಯಕ್ಷರ ಅವ್ಯವಹಾರದ ಬಗ್ಗೆ ಸಾಕ್ಷಿ ಹೇಳಿಕೆ ನೀಡಿ ಪಿತ್ರೋಡಿಯ ಸಂಘದ ಕಛೇರಿಗೆ ಬಂದಿದ್ದರು. ನಂತರ ಬಾಡಿಗೆ ಕಾರನ್ನು ಹಿಂದಕ್ಕೆ ನೀಡಲು ಹೋದ ಸಂದರ್ಭ ಸ್ಥಳೀಯ ಯೋಗೀಶ್ ಪಿತ್ರೋಡಿ(30) ಎಂಬಾತ ಅಧ್ಯಕ್ಷ ಗೀರೀಶ್ ವಿ. ಸುವರ್ಣರಿಗೆ ಹಲ್ಲೆ ಮಾಡಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಂಘವು ಬುಧವಾರ ತುರ್ತು ಸಭೆ ನಡೆಸಿ, ಸಂಘದಲ್ಲಿ ಈ ಹಿಂದೆ ಲಕ್ಷಾಂತರ ರೂ ಅವ್ಯಹಾರ ನಡೆದಿದ್ದು, ಈ ಪ್ರಕರಣ ಈಗ ನ್ಯಾಯಾಲಯದಲ್ಲಿದ್ದು, ಪ್ರಸ್ತುತ ಸಂಘದ ಅಧ್ಯಕ್ಷರು ಇದರ ಪ್ರಮುಖ ಸಾಕ್ಷಿಯಾಗಿದ್ದು, ಹಿಂದಿನ ಅವ್ಯವಹಾರಗಳ ಸಾಕ್ಷಿಗಳನ್ನು ನಾಶ ಮಾಡುವ ಉದ್ದೇಶದಿಂದ ಈ ಕೃತ್ಯ ನಡೆಸಲಾಗಿದೆ ಎಂದು ಸಂಘದ ಸಭೆಯಲ್ಲಿ ಸದಸ್ಯರು ಅಭಿಪ್ರಾಯ ತಿಳಿಸಿದ್ದಾರೆ.
ಸಂಘದ ತುರ್ತು ಸಭೆಯಲ್ಲಿ ನಿರ್ಣಾಯ ಕೈಗೊಂಡು ಆರೋಪಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಕಾಪು ಠಾಣೆಗೆ ಸಂಘವು ದೂರು ನೀಡಿದೆ.
ಹಲ್ಲೆಗೊಳಗಾದ ಅಧ್ಯಕ್ಷ ಗೀರೀಶ್ ವಿ. ಸುವರ್ಣ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.