ಸಂತೋಷ್ ಪಾಟೀಲ್ ಆತ್ಮಹತ್ಯೆಯ ‘ಬಿ’ ವರದಿ -ಪೊಲೀಸರ ತನಿಖಾ ಲೋಪ: ಮಾಜಿ ಎಡಿಜಿಪಿ ಭಾಸ್ಕರ ರಾವ್

ಉಡುಪಿ, ಜು.26: ಪಿ.ಎಸ್.ಐ ನೇಮಕಾತಿಯ ಸಂಪೂರ್ಣ ಪ್ರಕ್ರಿಯೆಯನ್ನೇ ರದ್ದುಪಡಿಸಿ, ಹೊಸದಾಗಿ ಪರೀಕ್ಷೆ ನಡೆಸುವಂತೆ ಮಾಜಿ ಎಡಿಜಿಪಿ ಹಾಗೂ ರಾಜ್ಯ ಆಮ್ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಭಾಸ್ಕರ ರಾವ್ ಆಗ್ರಹಿಸಿದ್ದಾರೆ.

ನಗರದ ಕಡಿಯಾಳಿಯಲ್ಲಿರುವ ಆಪ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ದೊಡ್ಡ ಭ್ರಷ್ಟಾಚಾರದ ಹಗರಣವಾಗಿ ಹೊರಹೊಮ್ಮಿರುವ ಪಿ.ಎಸ್.ಐ ನೇಮಕಾತಿಯ ಸಂಪೂರ್ಣ ಪ್ರಕ್ರಿಯೆಯನ್ನೇ ರದ್ದುಪಡಿಸಿ, ಹೊಸದಾಗಿ ಪರೀಕ್ಷೆ ನಡೆಸಬೇಕು. ಇಡೀ ಪ್ರಕರಣದ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲೇ ತನಿಖೆ ನಡೆಯಬೇಕು. ಎಸಿಬಿ, ಸಿಐಡಿ ತನಿಖೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ. ಏಕೆಂದರೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ತನಿಖಾಧಿಕಾರಿ ಗಳಾಗಿ ಯಾರನ್ನು ಬಂಧಿಸಬೇಕು, ಯಾರನ್ನು ರಕ್ಷಿಸಬೇಕು ಎಂಬುದನ್ನು ನಿರ್ಧರಿಸುತ್ತಾರೆ ಎಂದರು.

ಪೊಲೀಸ್ ಇಲಾಖೆಯಲ್ಲಿ ಇದ್ದಾಗಲೇ ತನಗೆ ಈ ಹಗರಣದ ವಾಸನೆ ಬಂದಿತ್ತು. ಈಗ ಹಗರಣದಲ್ಲಿ ಸಿಕ್ಕಿಬಿದ್ದಿರುವ ಹಿರಿಯ ಪೊಲೀಸ್ ಅಧಿಕಾರಿ ಅಮೃತಪಾಲ್ ಅವರಿಗೆ ಸರಕಾರದಲ್ಲಿ ಸಿಕ್ಕಿದ ಪ್ರಾಮುಖ್ಯತೆಯೇ ಇದರ ಸುಳಿವು ನೀಡಿತ್ತು. ನೇಮಕಾತಿ ಹಗರಣದಲ್ಲಿ ಅವರ ಬಂಧನವಾದಾಗ ನನ್ನ ಅನುಮಾನಗಳು ನಿಜವಾದವು ಎಂದರು.

ತಾನು ಬೆಂಗಳೂರು ಕಮಿಷನರ್ ಆಗಿದ್ದ ವೇಳೆ ಅಮೃತಪಾಲ್ ಯಾವಾಗಲೂ ಮುಖ್ಯಮಂತ್ರಿ ನಿವಾಸದ ಬಳಿ ಸುಳಿದಾಡುತಿದ್ದರು. ತಾನು ಪ್ರಶ್ನಿಸಿದಾಗ, ಹೀಗೆ ಸುಮ್ಮನೆ ಎಂದು ಹೇಳುತಿದ್ದರು. ಅವರೇ ಮುಂದಿನ ಕಮಿಷನರ್ ಆಗಿ ನೇಮಕಗೊಳ್ಳುತ್ತಾರೆ ಎಂದು ಉಹಾಪೋಹ ಹರಡಿತ್ತು, ತಾನು 1990ನೇ ಬ್ಯಾಚ್‍ನ ಐಪಿಎಸ್ ಅಧಿಕಾರಿ ಹಾಗೂ 1995ನೇ ಬ್ಯಾಚ್‍ನ ಅಮೃತಪಾಲ್ ನಡುವೆ ಸಾಕಷ್ಟು ಹಿರಿಯ ಅಧಿಕಾರಿಗಳಿದ್ದು, ಇವರು ಹೇಗೆ ಈ ಸ್ಥಾನ ಪಡೆಯುತ್ತಾರೆ ಎಂದು ನಾನು ಅಚ್ಚರಿಪಟ್ಟಿದ್ದೆ ಎಂದು ಭಾಸ್ಕರ ರಾವ್ ವಿವರಿಸಿದರು.

ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಬಿ ರಿಪೋರ್ಟ್ ಹಾಕಿರುವುದು ಪೊಲೀಸರ ತನಿಖಾ ಲೋಪವಾಗಿದೆ ಎಂದ ಅವರು,  ವ್ಯಕ್ತಿಯೊಬ್ಬ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರೆ ಸಾಮಾನ್ಯವಾಗಿ 306 ಸೆಕ್ಷನ್ ಅಡಿ ಆರೋಪಿಗಳನ್ನು ಪೊಲೀಸರು ಬಂಧಿಸುತ್ತಾರೆ. ಆದರೆ ಈಶ್ವರಪ್ಪ ಅವರನ್ನು ಬಂಧಿಸದಿರಲು ಕಾರಣವೇನು ಎಂದು ಪ್ರಶ್ನಿಸಿದರು. ಹಾಗೂ ಎಲ್ಲಾ ಆರೋಪಗಳಿಂದ ಮುಕ್ತರಾಗಿರುವ ಈಶ್ವರಪ್ಪ ಅವರನ್ನು ಮತ್ತೆ ಸಚಿವರನ್ನಾಗಿ ನೇಮಿಸಿದರೆ ಆಪ್ ಪಕ್ಷ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ. ಬೆಂಗಳೂರಿನಲ್ಲಿ ರಾಜ್ಯಪಾಲ ಭವನದ ಎದುರು ಪ್ರತಿಭಟನೆ ನಡೆಸಿ ಬಂಧನ ಕ್ಕೊಳಗಾಗಲು ತಾನು ಸಿದ್ಧನಿದ್ದೇನೆ ಎಂದು ಅವರು  ಎಚ್ಚರಿಸಿದರು.

ಇದೇ ವೇಳೆ ರಾಜ್ಯದಲ್ಲಿ ಲೋಕಾಯುಕ್ತ ಹಾಗೂ ಎಸಿಬಿ ಎರಡೆರಡು ತನಿಖಾ ಸಂಸ್ಥೆ ಯಾಕೆ ಬೇಕು ಎಂದು ಪ್ರಶ್ನಿಸಿದ ಅವರು, ಲೋಕಾಯುಕ್ತಕ್ಕೆ ಇನ್ನಷ್ಟು ಬಲ ತುಂಬಿ ರಾಜ್ಯದ ಮುಖ್ಯಮಂತ್ರಿಯ ವಿಚಾರಣೆ ನಡೆಸಲು ಅದಕ್ಕೆ ಅಧಿಕಾರ ನೀಡಬೇಕೆಂಬುದು ಆಪ್‍ನ ಬೇಡಿಕೆಯಾಗಿದೆ. ಇದೇ ವೇಳೆ ಹೊಸದಿಲ್ಲಿಯಲ್ಲಿ ಜನಲೋಕಪಾಲ್ ಮಸೂದೆ ಜಾರಿಗೊಳಿಸುವ ಕೇಜ್ರಿವಾಲ್ ಸರಕಾರದ ಪ್ರಯತ್ನಕ್ಕೆ ಕೇಂದ್ರ ಸರಕಾರ ಅಡ್ಡಿಯಾಗಿದೆ ಎಂದವರು ಆರೋಪಿಸಿದರು.

ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ದಿವಾಕರ ಸನಿಲ್, ರಾಜ್ಯ ಜಂಟಿ ಕಾರ್ಯದರ್ಶಿ ವಿವೇಕಾನಂದ ಸಾಲಿನ್, ಜಿಲ್ಲಾ ಕಾರ್ಯದರ್ಶಿ ಆಸ್ಲಿ ಕರ್ನೇಲಿಯೊ, ವಲಯ ಮುಖ್ಯಸ್ಥ ಜೆ.ಪಿ.ರಾವ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!