ಕೊಲ್ಲೂರು- ಕೊಡಚಾದ್ರಿ ಮಧ್ಯೆ ಕೇಬಲ್‌ಕಾರ್: ಸುಕುಮಾರ ಶೆಟ್ಟಿ

ಬೈಂದೂರು: ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಕೊಲ್ಲೂರು-ಕೊಡಚಾದ್ರಿ ಕೇಬಲ್‌ ಕಾರ್ ಯೋಜನೆ ಬಗ್ಗೆ ಈಗಾಗಲೇ ಸಂಸದರೊಂದಿಗೆ ಚರ್ಚಿಸಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಅದು ಕಾರ್ಯಗತಗೊಳ್ಳಲಿದೆ ಎಂದು ಶಾಸಕ ಸುಕುಮಾರ ಶೆಟ್ಟಿ ತಿಳಿಸಿದರು. 


ಮಂಗಳವಾರ ಬೈಂದೂರಿನಲ್ಲಿ ಸುದ್ದಿಗೋಷ್ಠಿ  ನಡೆಸಿದ ಅವರು ಪ್ರಮುಖ ಯೋಜನೆಗಳ ವಿವರ ನೀಡಿದರು. ಬೈಂದೂರು ಪಟ್ಟಣ ಪಂಚಾಯಿತಿ ಘೋಷಣೆ ಆಗಿದೆ. ಯಡ್ತರೆಯಲ್ಲಿ ₹10 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ, ನ್ಯಾಯಾಲಯ, ತಾಲ್ಲೂಕು ಪಂಚಾಯಿತಿ ಕಚೇರಿ ನಿರ್ಮಾಣ, ಭೂ ನ್ಯಾಯ ಮಂಡಳಿ, ಆಹಾರ ಶಾಖೆ ಆರಂಭ, ಬಸ್ ನಿಲ್ದಾಣ, ಸರ್ಕಾರಿ ಐಟಿಐ ಕಾಲೇಜು ಅಭಿವೃದ್ಧಿ, ವಿಶಾಲ ಒಳ, ಹೊರ ಕ್ರೀಡಾಂಗಣ, 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆ, ಡಯಾಲಿಸಿಸ್ ಸೌಲಭ್ಯ, ಕೊಲ್ಲೂರಿನಲ್ಲಿ ನೂತನ ಗೋಶಾಲೆ, ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣ ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಸಂಸದರ ಜತೆ ಚರ್ಚಿಸಿ, ಮುಖ್ಯಮಂತ್ರಿಯವರಿಗೆ ಪ್ರಸ್ತಾವ ಸಲ್ಲಿಸಲಾಗಿದ್ದು, ಶೀಘ್ರ ಮಂಜೂರಾತಿ ಸಿಗಲಿದೆ. ಅಗ್ನಿಶಾಮಕ ಠಾಣೆ  ಮಂಜೂರಾಗಿದ್ದು ₹10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ’  ಎಂದು ಅವರು ಹೇಳಿದರು.


ನಬಾರ್ಡ್ ನೆರವಿನಲ್ಲಿ ಪ್ರತಿ ಮನೆಗೆ ಕುಡಿಯುವ ನೀರು ಪೂರೈಕೆ ಯೋಜನೆಗೆ ₹220 ಕೋಟಿ,  8 ಗ್ರಾಮಗಳಿಗೆ ನೀರಾವರಿಯ ಸೌಕೂರು ಏತ ನೀರಾವರಿಗೆ ₹73 ಕೋಟಿ, ಸುಮನಾವತಿ ನದಿಗೆ ಸುಬ್ಬರಡಿಯಲ್ಲಿ ₹ 35 ಕೋಟಿ ವೆಚ್ಚದ ಕುಡಿಯುವ ನೀರು ಯೋಜನೆ, ಕೃಷಿ ಉದ್ದೇಶದ ಕಿಂಡಿ ಅಣೆಕಟ್ಟೆ , ಪಶ್ಚಿಮ ವಾಹಿನಿ ಯೋಜನೆಯಡಿಯಲ್ಲಿ ₹102 ಕೋಟಿ ವೆಚ್ಚದ ಬಹುಪಯೋಗಿ ಕಿಂಡಿ ಅಣೆಕಟ್ಟೆಗಳು ನಿರ್ಮಾಣ ಆಗಲಿವೆ ಎಂದರು.

ಮರವಂತೆ, ಗಂಗೊಳ್ಳಿ ಮತ್ತು ಕೊಡೇರಿ ಮೀನುಗಾರಿಕೆ ಬಂದರು ಅಭಿವೃದ್ಧಿಗೆ ಒಟ್ಟು ₹ 93.8 ಕೋಟಿ ಅನುದಾನ ಬಿಡುಗಡೆಯಾಗಿದೆ. ₹ 3 ಕೋಟಿ ವೆಚ್ಚದಲ್ಲಿ ಸಿದ್ಧಾಪುರ ಸರ್ಕಲ್ ನಿರ್ಮಾಣ, ₹ 5ಕೋಟಿ ವೆಚ್ಚದಲ್ಲಿ ಸೌಕೂರು ಮತ್ತು ಕೊಲ್ಲೂರು ದೇವಸ್ಥಾನ ಪ್ರದೇಶದ ಅಭಿವೃದ್ಧಿ ಕಾಮಗಾರಿ ಶೀಘ್ರ ಆರಂಭವಾಗಲಿದೆ. ಮರವಂತೆ ಮತ್ತು ಸೋಮೇಶ್ವರ ಬೀಚ್ ಅಭಿವೃದ್ಧಿಗೆ ₹10 ಕೋಟಿ ಬಿಡುಗಡೆಯಾಗಿದೆ. ವಾರಾಹಿ , ನಮ್ಮ ಗ್ರಾಮ ನಮ್ಮ ರಸ್ತೆ , ಪಿ.ಎಂ.ಜಿ.ಎಸ್.ವೈ. ಮೀನುಗಾರಿಕಾ ರಸ್ತೆ ಯೋಜನೆಗಳಡಿ ಹಲವು ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಲ್ಲಿ ₹ 20 ಕೋಟಿ ವೆಚ್ಚದ ಹೆಮ್ಮಾಡಿ-ನೆಂಪುವರೆಗಿನ ರಸ್ತೆ ದ್ವಿಪಥ ಕಾಮಗಾರಿ ಪ್ರಗತಿಯಲ್ಲಿದೆ. ಹೆರಂಜಾಲು ವಸತಿ ಶಾಲೆ ಸಿಬ್ಬಂದಿ ವಸತಿ ಗೃಹ, ಬೈಂದೂರು ವಿದ್ಯಾರ್ಥಿ ನಿಲಯದ ನಿರ್ಮಾಣ, ನಾಲ್ಕು ಅಂಬೇಡ್ಕರ್ ಭವನ ಮತ್ತು ಒಂದು ಜಗಜೀವನ್‌ರಾಂ ಭವನ ನಿರ್ಮಾಣವೂ ಶೀಘ್ರ ಆರಂಭವಾಗಲಿದೆ. ಕೊಲ್ಲೂರಿನಲ್ಲಿ ₹10 ಕೋಟಿ ವೆಚ್ಚದ ವಿದ್ಯುತ್ ಕೇಂದ್ರ ನಿರ್ಮಾಣಕ್ಕೆ ಅರಣ್ಯ ಇಲಾಖೆಯ ಒಪ್ಪಿಗೆ ಪಡೆದಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅವರು ವಿವರಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಸುರೇಶ ಬಟವಾಡಿ, ಶೋಭಾ ಪುತ್ರನ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಮಾಲಿನಿ ಕೆ, ಬಿಜೆಪಿ ವಲಯ ಸಮಿತಿ ಅಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ, ಪಕ್ಷದ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಾಲಚಂದ್ರ ಭಟ್, ಪ್ರಕಾಶ ಪೂಜಾರಿ ಇದ್ದರು.

1 thought on “ಕೊಲ್ಲೂರು- ಕೊಡಚಾದ್ರಿ ಮಧ್ಯೆ ಕೇಬಲ್‌ಕಾರ್: ಸುಕುಮಾರ ಶೆಟ್ಟಿ

Leave a Reply

Your email address will not be published. Required fields are marked *

error: Content is protected !!