ಕಸ್ತೂರಿ ರಂಗನ್ ವರದಿಯ ಸಾಧಕ ಭಾದಕಗಳ ಫಿಸಿಕಲ್ ಲ್ಯಾಂಡ್ ಸ್ಕೇಪಿಂಗ್ ಸರ್ವೇ
ಉಡುಪಿ, ಜು.26 : ಕಸ್ತೂರಿ ರಂಗನ್ ವರದಿಯ ಸಾಧಕ ಭಾದಕಗಳ ಬಗ್ಗೆ ಪರಿಶೀಲನೆ ನಡೆಸಲು ಫಿಸಿಕಲ್ ಲ್ಯಾಂಡ್ ಸ್ಕೇಪಿಂಗ್ ಸರ್ವೇ ನಡೆಸಲು ಕೇಂದ್ರದಿಂದ ಸಮಿತಿ ರಚನೆ ಮಾಡಲಾಗಿದೆ.
ಈ ಬಗ್ಗೆ ಆದೇಶ ನೀಡಿರುವ ಕೇಂದ್ರ ಅರಣ್ಯ ಸಚಿವರಾದ ಶ್ರೀ ಭೂಪೆಂದ್ರ ಯಾದವ್ ಅವರು, ಕಸ್ತೂರಿ ರಂಗನ್ ವರದಿಯನ್ನು ಪರಿಗಣಿಸುವ ಮೊದಲು, ಪಶ್ಚಿಮ ಘಟ್ಟಗಳಲ್ಲಿ ವಾಸವಾಗಿರುವ ಹಾಗೂ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿರುವ ರೈತರ ಕೋರಿಕೆಯಂತೆ ‘ಫಿಸಿಕಲ್ ಲ್ಯಾಂಡ್ ಸ್ಕೇಪಿಂಗ್’ ನಡೆಸುವಂತೆ ಹಾಗೂ ಎಲ್ಲ ರಾಜ್ಯಗಳ ಬೇಡಿಕೆಗಳು ಹಾಗೂ ಸಲಹೆಗಳನ್ನು ಪರೀಕ್ಷಿಸುವ ನಿಟ್ಟಿನಲ್ಲಿ 5 ಜನರನ್ನೊಳಗೊಂಡ ಸಮಿತಿಯನ್ನು ನಿರ್ಮಿಸಿ ರೈತರ ಬೇಡಿಕೆಗಳನ್ನು ಪರಿಗಣಿಸುವಂತೆ ಹಾಗೂ ಈ ತಂಡ, ಎಲ್ಲ ರಾಜ್ಯಗಳ ಸಲಹೆಗಳನ್ನು ಸ್ವೀಕರಿಸಿ, ರೈತರ ಹಿತ ಕಾಯುವ ವರದಿಯನ್ನು ಮುಂದಿನ ಒಂದು ವರ್ಷದ ಒಳಗಾಗಿ ಸಚಿವಾಲಯಕ್ಕೆ ಸಲ್ಲಿಸುವಂತೆ ತಿಳಿಸಿದ್ದಾರೆ
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು,”ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕ ಎಂದು ನಮ್ಮ ಆರೋಪ ಇತ್ತು. ಇದನ್ನು ಸ್ಯಾಟಲೈಟ್ ಚಿತ್ರಗಳ ಆಧಾರದಲ್ಲಿ ಮಾಡಲಾಗಿದೆ ಎಂದು ನಾವು ಆರೋಪ ಮಾಡಿದ್ದೆವು. ಕಾಫಿ ತೋಟ, ತೆಂಗಿನ ತೋಟವನ್ನು ಕೂಡಾ ಈ ವರದಿಯಲ್ಲಿ ಕಾಡು ಎಂದು ಪರಿಗಣಿಸಲಾಗಿತ್ತು. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಗ್ರಾಮಗಳಿಗೆ ಭೇಟಿ ನೀಡಿ ಮರು ಸರ್ವೇ ನಡೆಸಿ ವರದಿ ಮಾಡಬೆಕು ಎಂದು ನಾವು ಆಗ್ರಹಿಸದ್ದೆವು. ಹಿಂದಿನ ಯಾವುದೇ ಸರ್ಕಾರಗಳು ಇದನ್ನು ಒಪ್ಪಿಕೊಂಡಿರಲಿಲ್ಲ, ಅದರೆ ಇವತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಅರಣ್ಯ ಸಚಿವ ಭೂಪೇಂದ್ರ ಯಾದವ್ ರವರು ಒಂದು ತೀರ್ಮಾನ ಮಾಡಿದ್ದಾರೆ. ವರದಿಯನ್ನು ಪರೀಶೀಲನೆ ಮಾಡಲು ಒಂದು ಸಮಿತಿಯನ್ನು ರಚಿಸಿದ್ದಾರೆ. ಈ ತಂಡ ಎಲ್ಲಾ ರಾಜ್ಯ, ಜಿಲ್ಲೆಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ಒಂದು ವರ್ಷದಲ್ಲಿ ವರದಿ ನೀಡಲು ಆದೇಶಿಸಿದ್ದಾರೆ. ಇವತ್ತು ನಮಗೆ ಸ್ವಲ್ಪ ಉಸಿರಾಡುವಂತೆ ಆಗಿದೆ. ಮುಂದಿನ ಒಂದು ವರ್ಷದಲ್ಲಿ ನಮ್ಮ ಭಾಗದ ಜನರ ಸಮಸ್ಯೆ ಯನ್ನು ಕೇಳಲು ಸಮಿತಿ ಬರಲಿದೆ” ಎಂದು ತಿಳಿಸಿದ್ದಾರೆ.