ಉಡುಪಿ: ಕುಡಿತ ಚಟಕ್ಕೆ ಮೂವರ ಬಲಿ
ಉಡುಪಿ ಜು.25(ಉಡುಪಿ ಟೈಮ್ಸ್ ವರದಿ): ಕುಡಿತದ ಚಟದಿಂದ ಮೂವರು ವ್ಯಕ್ತಿಗಳು ಜೀವ ಕಳೆದು ಕೊಂಡಿರುವ ಬಗ್ಗೆ ಜಿಲ್ಲೆಯ ಮಲ್ಪೆ, ಬೈಂದೂರು ಕುಂದಾಪುರ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.
ಮಲ್ಪೆಯ ಕಲ್ಯಾಣಪುರದ ಮೂಡುಕುದ್ರು ಎಂಬಲ್ಲಿ ಜಗದೀಶ ಕೆ ಪೂಜಾರಿ (48) ಎಂಬವರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ಅವರು ಜು.25 ರಂದು ಪಾನಮತ್ತನಾಗಿ ಮನೆಗೆ ವಾಪಸ್ಸು ಬರುವಾಗ ದಾರಿಯಲ್ಲಿ ಇದ್ದ ಕೆರೆಗೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂಬುದಾಗಿ ಮೃತರ ಅಣ್ಣ ಸುರೇಶ್ ಕೆ.ಪೂಜಾರಿ ಎಂಬವರು ನೀಡಿದ ಮಾಹಿತಿಯಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರಿನ ಪಡುವರಿ ಗ್ರಾಮದ ಉಪ್ಪುಂದ-ತಾರಾಪತಿ ರಸ್ತೆಯ ನದಿಕಂಠದ ಬಳಿ ನಾರಾಯಣ ಪೂಜಾರಿ(60) ಎಂಬವರು ಆಕಸ್ಮಿಕವಾಗಿ ಕಾಲುಜಾರಿ ಮೋರಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಜು.24 ರಂದು ರಾತ್ರಿ ವಿಪರೀತ ಮಧ್ಯ ಸೇವನೆ ಮಾಡಿಕೊಂಡು ಪಡುವರಿ ಗ್ರಾಮದ ಉಪ್ಪುಂದ-ತಾರಾಪತಿ ರಸ್ತೆಯ ನದಿಕಂಠದ ಬಳಿಯ ಮೋರಿಯ ಬಳಿ ನಡೆದುಕೊಂಡು ಬರುತ್ತಿರುವಾಗ ಆಕಸ್ಮಿಕವಾಗಿ ಕಾಲುಜಾರಿ ಮೋರಿ ಕೆಳಗೆ ತಲೆ ಕೆಳಗಾಗಿ ಬಿದ್ದು ಮೃತ ಪಟ್ಟಿರುವುದಾಗಿ ಮೃತರ ಮಗ ಸುನೀಲ್ ಪೂಜಾರಿ ಎಂಬವರು ನೀಡಿದ ಮಾಹಿತಿಯಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರದ ಕಾವ್ರಾಡಿ ಗ್ರಾಮದ ವಾಲ್ತೂರು ಕೊಕ್ಕೋಡು ಎಂಬಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಗಣೇಶ (38) ಎಂಬವರು ತಮ್ಮ ಖಾಯಿಲೆ ಉಲ್ಬಣಗೊಂಡು ಮೃತಪಟ್ಟಿದ್ದಾರೆ. ಜು.24 ರಂದು ವಿಪರೀತ ಶರಾಬು ಕುಡಿಯುವ ಅಭ್ಯಾಸದಿಂದ ಇವರ ಜಾಂಡಿಸ್ ಕಾಯಿಲೆ ಉಲ್ಬಣಗೊಂಡಿದ್ದು ಇದೇ ಕಾರಣದಿಂದ ಗಣೇಶ ರವರು ಮೃತಪಟ್ಟಿರುವುದಾಗಿ ಮೃತರ ತಮ್ಮ ಸಂತೋಷ ಎಂಬವರು ನೀಡಿದ ಮಾಹಿತಿಯಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.