ಉಡುಪಿ: ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ತುಳುನಾಡ ರಕ್ಷಣಾ ವೇದಿಕೆ ವಿರೋಧ
ಉಡುಪಿ ಜು.25(ಉಡುಪಿ ಟೈಮ್ಸ್ ವರದಿ) ಉಡುಪಿ ಪುಷ್ಪ ಬೇಕರಿ ಮುಂಭಾಗದಲ್ಲಿರುವ ವೃತ್ತಕ್ಕೆ “ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ” ರ ಹೆಸರು ನಾಮಕರಣ ಮಾಡುವುದನ್ನು ವಿರೋಧಿಸಿ ಇಂದು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆ ಇದರ ವತಿಯಿಂದ ನಗರ ಸಭಾ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷರಾದ ರೋಹಿತ್ ಕರಂಬಳ್ಳಿಯವರ ನೇತ್ರತ್ವದಲ್ಲಿ ಇಂದು ಮನವಿ ಸಲ್ಲಿಸಲಾಗಿದ್ದು, ವೇದಿಕೆ ವತಿಯಿಂದ ಉಡುಪಿ ಪುಷ್ಪ ಬೇಕರಿ ಮುಂಭಾಗದಲ್ಲಿರುವ ವೃತ್ತಕ್ಕೆ “ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ” ರ ಹೆಸರು ನಾಮಕರಣ ಮಾಡುವುದಕ್ಕೆ ಆಕ್ಷೇಪಿಸಲಾಗಿದ್ದು, ತುಳುನಾಡಿನ ಗಣ್ಯರಿಗೆ ಗೌರವ ನೀಡಿ ತುಳುನಾಡಿನ ಹಿರಿಯರ ಹೆಸರನ್ನು ನಾಮಕರಣ ಮಾಡಬೇಕಾಗಿ ನಗರಸಭೆಯ ಪೌರಾಯುಕ್ತರಿಗೆ ಹಾಗೂ ನಗರಸಭಾ ಅಧ್ಯಕ್ಷರಿಗೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಅಜರುದ್ಧೀನ್ ಸುಬ್ರಹ್ಮಣ್ಯ, ಸಂಘಟನಾ ಕಾರ್ಯದರ್ಶಿ ಮೊಹಮ್ಮದ್ ಹಾರಿಸ್, ಜಿಲ್ಲಾ ಕಾರ್ಯದರ್ಶಿ ಸುಭಾಶ್ ಸುಧಾನ್, ಗಣೇಶ್ ರಾವ್, ಸದಾನಂದ ಜಿ. ಪುತ್ರನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಇನ್ನು ಪೌರಾಯುಕ್ತರಿಗೆ ಸಲ್ಲಿಸಿರುವ ಮನವಿಯಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯ ಸಿಟಿ ಬಸ್ ನಿಲ್ದಾಣ ಹಾಗೂ ನರ್ಮ್ ಬಸ್ ನಿಲ್ದಾಣ ಬಳಿಯಿಂದ ಸರ್ವಿಸ್ ಬಸ್ ನಿಲ್ದಾಣಕ್ಕೆ ಹೋಗುವ ಹಾಗೂ ಪುಷ್ಪ ಬೇಕರಿಯ ಮುಂಭಾಗದಲ್ಲಿರುವ ವೃತ್ತಕ್ಕೆ ” ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತ’ ಎಂದು ನಾಮಕರಣ ಮಾಡುವ ಬಗ್ಗೆ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವತಿಯಿಂದ ಆಕ್ಷೇಪವಿದೆ.
ತುಳುನಾಡಿನ ಪ್ರಾಚೀನ ರಾಜಧಾನಿ ಬಾರ್ಕೂರು, ಇದು ಉಡುಪಿ ಜಿಲ್ಲೆಗೆ ಸೇರಿದ್ದಾಗಿದೆ. ತುಳುನಾಡಿಗೆ ಸಾವಿರಾರು ವರ್ಷದ ಇತಿಹಾಸವಿದೆ. ತುಳುನಾಡಿಗಾಗಿ ಉಡುಪಿ ಜಿಲ್ಲೆಯಲ್ಲೇ ಸಾಧನೆಗೈದಿರುವ ಕ್ರೀಡಾಳುಗಳು ಸಾಹಿತಿಗಳು, ಕಲಾವಿದರು, ಗಣ್ಯರು, ಹೋರಾಟಗಾರರು ಹಾಗೂ ರಾಜ ಮನೆತನದವರುಗಳಿದ್ದು ಇವರಲ್ಲಿ ಓರ್ವರ ಹೆಸರನ್ನು ನಾಮಕರಣ ಮಾಡಿ ತುಳುನಾಡಿನ ಹಿರಿಯ ಗಣ್ಯರಿಗೆ ಗೌರವ ಸಲ್ಲಿಸಬೇಕು.
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರಿಗೆ ರಾಜ್ಯದಲ್ಲಿ ಹಲವಾರು ಕಡೆಗಳಲ್ಲಿ ಗೌರವ ಸೂಚಿಸಲಾಗಿದೆ. ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆಯ ಕೋರಿಕೆಯಂತೆ ತುಳುನಾಡಿನಲ್ಲಿರುವ ಹೋರಾಟಗಾರರ, ಸ್ವಾತಂತ್ರ್ಯ ಹೋರಾಟಗಾರರ, ವೀರರ, ಮಹಾತ್ಮರೋರ್ವರ ಹೆಸರು ಸೂಚಿಸಿ ವೃತ್ತಕ್ಕೆ ನಾಮಕರಣ ಮಾಡಬೇಕಾಗಿ ತುಳುನಾಡ ರಕ್ಷಣಾ ವೇದಿಕೆ ವಿನಂತಿಸುತ್ತದೆ. ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತ ಎಂದು ನಾಮಕರಣ ಮಾಡಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ತಿಳಿಸಲಾಗಿದೆ.