ಸರ್ಕಾರಿ ಶಾಲೆ ವಿಲೀನ ವಿರೋಧಿಸಿದ ಶಿಕ್ಷಕನಿಗೆ ನೋಟಿಸ್
ಬೆಳಗಾವಿ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು, 13,800 ಸರ್ಕಾರಿ ಶಾಲೆಗಳ ವಿಲೀನ ಕುರಿತು ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆಯನ್ನು ವಿರೋಧಿಸಿ, ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದ ರಾಯಬಾಗ ತಾಲ್ಲೂಕಿನ ನಿಡಗುಂದಿಯ ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ವೀರಣ್ಣ ಮಡಿವಾಳರ ಅವರಿಗೆ ಚಿಕ್ಕೋಡಿ ಡಿಡಿಪಿಐ ಎಂ.ಎಲ್. ಹಂಚಾಟೆ ಅವರು ಕಾರಣ ಕೇಳಿ ಜುಲೈ 22ರಂದು ನೋಟಿಸ್ ಜಾರಿಗೊಳಿಸಿದ್ದಾರೆ.
ಸಚಿವರ ಹೇಳಿಕೆಗೆ ನೀವು, ಇದು 13,800 ಶಾಲೆಗಳ ವಿಲೀನವಲ್ಲ. ಅಷ್ಟು ಶಾಲೆಗಳ ಹತ್ಯಾಕಾಂಡ. ಸರ್ಕಾರಿ ಶಾಲೆಗಳ ಮಕ್ಕಳ ಭವಿಷ್ಯದ ಮಾರಣಹೋಮ’ ಎಂಬ ಅಭಿಪ್ರಾಯ ವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದೀರಿ. ಇದು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ಕ್ಕೆ ವ್ಯತಿರಿಕ್ತವಾಗಿದ್ದು, ನಡತೆ ನಿಯಮಗಳು 1966ರ ನಿಯಮ 3 ಅನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ನಿಮ್ಮ ಮೇಲೆ ಏಕೆ ಕ್ರಮ ಜರುಗಿಸಬಾರದು ಎನ್ನುವುದಕ್ಕೆ 3 ದಿನಗಳಲ್ಲಿ ಉತ್ತರ ನೀಡಬೇಕು ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವೀರಣ್ಣ ಮಡಿವಾಳರ, ‘ನನಗೆ ಯಾರನ್ನೂ ವಿರೋಧಿಸುವ ಅಥವಾ ಪ್ರತಿಭಟಿಸುವ ಉದ್ದೇಶವಿಲ್ಲ. ಸರ್ಕಾರಿ ಶಾಲೆಗಳು ಮುಚ್ಚುತ್ತವೆ ಎಂಬ ಆತಂಕದಿಂದ ನನ್ನ ಸಂವೇದನೆಯನ್ನು ಎರಡು ಸಾಲಿನ ಪದ್ಯದಲ್ಲಿ ಅಭಿವ್ಯಕ್ತಿಸಿದ್ದೇನಷ್ಟೇ’ ಎಂದರು.ನೋಟಿಸ್ ಜಾರಿ ಗೊಳಿಸಿದ ಸಂಗತಿಯನ್ನು ಭಾನುವಾರ ವೀರಣ್ಣ ಮಡಿವಾಳರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ.