ಹಿರಿಯರ ಬದುಕು ಪರಿಚಯಿಸುವ ಕೆಲಸ ಆಗಬೇಕು: ಸುಕೃತಾ ವಾಗ್ಳೆ
ಶಿರ್ವ: ನಮ್ಮ ಹಿರಿಯರು ಯಾವುದೇ ಆಧುನಿಕ ತಂತ್ರಜ್ಞಾನದ ಸಹಾಯವಿಲ್ಲದೇ, ಬಹಳಷ್ಟು ಕಷ್ಟದಿಂದ ಬಹಳ ಅರ್ಥಪೂರ್ಣವಾಗಿ ಬಾಳಿ ಬದುಕಿದ್ದಾರೆ.ಅವರ ಆಹಾರ, ಆರೋಗ್ಯ,ಶ್ರಮ ದುಡಿಮೆ ಎಲ್ಲವೂ ನಮಗೆ ಮಾದರಿ.ಹಾಗಿರುವಾಗ ಅಂತಹ ಹಿರಿಯರ ಅಂದಿನ ದಿನಗಳ ಬಗ್ಗೆ ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ನಾವು ಮಾಡಬೇಕಾಗಿದೆ.
ಅವರದೇ ದಾರಿಯಲ್ಲಿ ನಡೆಯುವಂತೆ ನಾವು ಪ್ರೇರೇಪಿಸಬೇಕಾಗಿದೆ ಎಂದು ಅವರು ಹೇಳಿದರು. ಅವರು ಶಿರ್ವ ಮಹಿಳಾ ಮಂಡಲದ ವಜ್ರಮಹೋತ್ಸವ ವರ್ಷಾಚರಣೆಯ ಅಂಗವಾಗಿ ನಡೆಯುತ್ತಿರುವ ತಿಂಗಳ ಕಾರ್ಯಕ್ರಮ ಯೋಜನೆಯಡಿ ಜರಗಿದ ಆಟಿದ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.
ನಾವಿಂದು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿದ್ದೇವೆ.ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಮರೆತುಹೋಗುತ್ತಿದ್ದೇವೆ. ಈ ಪ್ರಕೃತಿಯಲ್ಲಿ ಮಹಿಳೆಗೆ ಮಾತ್ರ ಒಂದು ಜೀವವನ್ನು ಸೃಷ್ಟಿಸುವ ಅದ್ಭುತ ಶಕ್ತಿಯನ್ನು ಕೊಡಲಾಗಿದೆ.ಹಾಗಿರುವಾಗ ಆ ಜೀವವನ್ನು ಉತ್ತಮ ಸಂಸ್ಕಾರವನ್ನು ನೀಡಿ ಬೆಳೆಸುವ,ಕಲಿಸುವ ಜವಾಬ್ದಾರಿಯೂ ಮಹಿಳೆಯದೇ ಎನ್ನುವುದನ್ನು ಮಹಿಳೆಯರಾಗಿ ನಾವು ತಿಳಿದುಕೊಂಡಿರಬೇಕು ಎಂದವರು ತಿಳಿಸಿದರು.
ಆಟಿ ತಿಂಗಳ ವಿಶೇಷತೆಗಳ ಬಗ್ಗೆ ಉಡುಪಿ ಸಮೂಹ ಶಿಕ್ಷಣ ಸಂಸ್ಥೆಗಳು ಇಲ್ಲಿನ ಉಪನ್ಯಾಸಕರಾಗಿರುವ ಅರ್ಪಿತಾ ಶೆಟ್ಟಿ ಅವರು ಮಾತನಾಡುತ್ತಾ ನಮ್ಮ ಹಿರಿಯರು ಆಟಿ ತಿಂಗಳ ಆ ಕಷ್ಟದ ದಿನಗಳಲ್ಲಿ ಉಪಯೋಗಿಸುತಿದ್ದ ಪ್ರತೀಯೊಂದು ವಸ್ತುಗಳಲ್ಲೂ ಆರೋಗ್ಯಕರ ಅಂಶಗಳಿದ್ದವು,ಪ್ರತಿಯೊಂದು ಆಚರಣೆಗಳಲ್ಲೂ ಒಂದಲ್ಲ ಒಂದು ವಿಶೇಷ ಹಿನ್ನೆಲೆಯಿರುತ್ತಿತ್ತು.ಆದ್ದರಿಂದ ಅವುಗಳನ್ನು ನಮ್ಮ ಬದುಕಿನ ಲ್ಲಿಯೂ ಅಳವಡಿಸಿಕೊಂಡು ,ನಮ್ಮ ಮಕ್ಕಳಿಗೆ ತಿಳಿಸಿಕೊಡಬೇಕು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಮಹಿಳಾ ಮಂಡಲದ ಗೌರವಾಧ್ಯಕ್ಷರಾದ ಬಬಿತಾ ಜಗದೀಶ್ ಅರಸ ಅವರು ವಹಿಸಿದ್ದರು.ಹಿರಿಯ ಸದಸ್ಯೆ ಹೇಮಲತಾ ಶಂಭು ಶೆಟ್ಟಿ ಅಟ್ಟಿಂಜ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶಿರ್ವ ಇದರ ಅಧ್ಯಕ್ಷರಾದ ವಿಠ್ಠಲ ಆಂಚನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮಹಿಳಾ ಮಂಡಲದ ಅಧ್ಯಕ್ಷೆ ಗೀತಾ ವಾಗ್ಳೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನೂ ಸ್ವಾಗತಿಸಿದರು.ಈ ಸಂದರ್ಭದಲ್ಲಿ ಸಭಿಕರಿಗಾಗಿ ಆಟಿ ತಿಂಗಳ ಕುರಿತಾದ ಕೆಲವು ಸ್ಪರ್ಧೆಗಳನ್ನು ಸ್ಥಳದಲ್ಲೇ ನಡೆಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.ಇದೇ ಸಂದರ್ಭದಲ್ಲಿ ಪಡುಬೆಳ್ಳೆ ಶ್ರೀ ನಾರಾಯಣ ಗುರು ಪ್ರೌಢಶಾಲೆ ಯ ಆರು ಮಂದಿ ಬಡ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಲ್ ಬ್ಯಾಗ್ ಗಳನ್ನು ವಿತರಿಸಲಾಯಿತು.ಕೊನೆಯಲ್ಲಿ ಕೋಶಾಧಿಕಾರಿ ಜೆಸಿಂತಾ ಮರಿಯಾ ಫುರ್ಟಾಡೋ ಅವರು ಧನ್ಯವಾದಗಳನ್ನು ಅರ್ಪಿಸಿದರು. ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ.ಆರ್.ಪಾಟ್ಕರ್, ಉಪಾಧ್ಯಕ್ಷೆ ಗ್ರೇಸಿ ಕಾರ್ಡೋಜ,ಸಮಾಜ ಸೇವಕರಾದ ಅನಂತರಾಯ ಶೆಣೈ,ಕಾರ್ಯಕ್ರಮದ ಪ್ರಾಯೋಜಕರಾದ ಶ್ರೀನಿವಾಸ ಶೆಣೈ ಹಾಗೂ ಲಕ್ಷ್ಮೀ ಶೆಣೈ, ಇನ್ನೋರ್ವ ಪ್ರಾಯೋಜಕರಾದ ನಿವೃತ್ತ ಶಿಕ್ಷಕ ಶ್ರೀನಿವಾಸ ರಾವ್, ವೆಂಕಟೇಶ್ ಕಾಮತ್, ದಿನೇಶ್, ಗೋವಿಂದ ಕುಂದರ್, ಸದಾನಂದ ವಾಗ್ಳೆ, ಮಹಿಳಾ ಮಂಡಲದ ಉಪಾಧ್ಯಕ್ಷೆ ಸುಮತಿ ಜಯಪ್ರಕಾಶ್ ಸುವರ್ಣ, ಕಾರ್ಯದರ್ಶಿ ಡಾ.ಸ್ಪೂರ್ತಿ ಶೆಟ್ಟಿ ಜೊತೆ ಕಾರ್ಯದರ್ಶಿ ಗೀತಾ ಮೂಲ್ಯ ಸುನೀತಾ ಸದಾನಂದ್,ಮಾಲತಿ ಮುಡಿತ್ತಾಯ,ದೀಪಾ ಶೆಟ್ಟಿ,ಆಫ್ರಿನ್ ಬಾನು, ಪುಷ್ಪಾ ಆಚಾರ್ಯ,ಐರಿನ್ ಲುಸ್ರಾದೋ ಮುಂತಾದವರು ಉಪಸ್ಥಿತರಿದ್ದರು. ಜಯಶ್ರೀ ಜಯಪಾಲ್ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.ಕಾರ್ಯಕ್ರಮ ಮುಗಿದ ಬಳಿಕ ಎಲ್ಲರಿಗೂ ಆಟಿ ತಿಂಗಳ ವಿಶೇಷ ತಿನಿಸುಗಳನ್ನು ಉಣಬಡಿಸಲಾಯಿತು.