ಉಡುಪಿ: ವಕೀಲೆಯ ಮನೆಗೆ ನುಗ್ಗಿ ನಗ ನಗದು ದೋಚಿದ್ದ ಆರೋಪಿ ಸೆರೆ
ಉಡುಪಿ: ನಗರದ ಹೃದಯ ಭಾಗದ ಕೋರ್ಟ್ ರಸ್ತೆ ಸಮೀಪದ ವಕೀಲೆಯ ಮನೆಗೆ ನುಗ್ಗಿ ನಗ ನಗದು ದೋಚಿದ್ದ ಆರೋಪಿಯನ್ನು ಉಡುಪಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುತ್ತಣ್ಣ ಬಸಣ್ಣ ಮಾವರಾಣಿ (27) ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ.ಹಾಡು ಹಗಲೇ ಮನೆಗೆ ನುಗ್ಗಿ ಕಪಾಟಿನಲ್ಲಿದ್ದ ನಗದು, ಚಿನ್ನಾಭರಣ, ಬೆಲೆಬಾಳುವ ಸೀರೆ ಸೇರಿದಂತೆ ಒಟ್ಟು ಇಪ್ಪತೈದು ಲಕ್ಷದ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದ.
ಆರೋಪಿಯಿಂದ ಸುಮಾರು ಹತ್ತು ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 38,500 ರೂ. ನಗದು ವಶ ಪಡಿಸಿಕೊಳ್ಳಲಾಗಿದೆ. ಆರೋಪಿಯನ್ನ ಉಡುಪಿ ನ್ಯಾಯಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗೆ ನ್ಯಾಯಲವು ಹದಿನೈದು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಮಾಜಿ ಪ್ರೇಯಸಿಯೇ ಕಳ್ಳತನದ ಮಾಸ್ಟರ್ ಪ್ಲಾನರ್: ಸದ್ಯ ಪೊಲೀಸ್ ಬಂಧಿಸಿರುವ ಮುತ್ತಣ್ಣನ ಮಾಜಿ ಪ್ರಿಯತಮೆಯೇ ಈ ಕಳ್ಳತನ ಪ್ರಕರಣದ ಸೂತ್ರಧಾರಿ ಎನ್ನಲಾಗಿದೆ. ಕೆಲವು ವರ್ಷಗಳ ಹಿಂದೆ ವಕೀಲೆಯ ಮನೆಯಲ್ಲಿ ಕೆಲಸಕ್ಕಿದ್ದ ಯುವತಿ ಹಾಕಿದ್ದ ಪ್ಲಾನ್ ಪ್ರಕಾರ ಮುತ್ತಣ್ಣ ಕಳ್ಳತನ ಮಾಡಿದ್ದಾನೆ ಎನ್ನಲಾಗಿದೆ. ಲಾರಿ ಚಾಲಕನಾಗಿರುವ ಮುತ್ತಣ್ಣ ಉಡುಪಿಗೆ ಪದೇ ಪದೇ ಬರುತ್ತಿದ್ದಾಗ ತನ್ನ ಪ್ರಿಯತಮೆಯನ್ನು ಭೇಟಿಯಾಗುತ್ತಿದ್ದ. ಈ ಸಂಧರ್ಭದಲ್ಲಿ ತಾನು ಈಹಿಂದೆ ಕೆಲಸಕ್ಕಿದ್ದ ಮನೆಯಲ್ಲಿ ಇದ್ದ ಚಿನ್ನಾಭರಣಗಳ ಬಗ್ಗೆ ಮಾಹಿತಿ ನೀಡಿದ್ದಾಳೆ. ಹೀಗಾಗಿ ಉಡುಪಿಗೆ ಲಾರಿಯಲ್ಲಿ ಸರಕು ಸಾಗಿಸಲು ಬಂದಾತ ಹಾಡುಹಗಲೇ ಮೊದಲೇ ಪ್ಲಾನ್ ಮಾಡಿದ್ದ ರೀತಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ.
ನಗರದ ಎಲ್ಲಾ ಸಿಸಿ ಟಿವಿಗಳನ್ನು ಪರಿಶೀಲಿಸಿದಾಗ ಆರೋಪಿಯ ಸುಳಿವು ಸಿಕ್ಕಿದೆ. ತನಿಖೆ ಚುರುಕುಗೊಳಿಸಿ ಆತನಿಗಾಗಿ ಬಲೆ ಬೀಸಿದ ಪೊಲೀಸರ ತಂಡಕ್ಕೆ ಆರೋಪಿ ಮುತ್ತಣ್ಣ ಬಾಗಲಕೋಟೆ ಜಿಲ್ಲೆಯ ನೀಲನಗರ ಎಂಬಲ್ಲಿ ಬಂಧಿಸಿದ್ದಾರೆ.