ಮಣಿಪಾಲ: ಜಾಗದ ತಕರಾರು- ಮಹಿಳೆಗೆ ಡೈರಿ ಮಾಲೀಕನಿಂದ ಹಲ್ಲೆ
ಮಣಿಪಾಲ ಜು.24 (ಉಡುಪಿ ಟೈಮ್ಸ್ ವರದಿ): ಜಾಗದ ತಕಾರಾರಿಗೆ ಸಂಬಂಧಿಸಿ ಮಹಿಳೆಯೊಬ್ಬರಿಗೆ ಹಲ್ಲೆ ಮಾಡಿ ಬೆದರಿಕೆ ಹಾಕಿರುವ ಘಟನೆ ಹೆರ್ಗದ ಮಣಿಪಾಲ ಮಿಲ್ಕ್ ಡೈರಿ ಬಳಿ ನಡೆದಿದೆ.
ಈ ಬಗ್ಗೆ ಹೆರ್ಗದ ಸುಶೀಲ ನಾಯ್ಕ ಎಂಬವರು ತಮ್ಮ ನೆರೆ ಮನೆ ನಿವಾಸಿ ಮುದ್ದು ನಾಯ್ಕ ಎಂಬಾತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಹೆರ್ಗದ ನಂದಿನಿ ಮಿಲ್ಕ್ ಡೈರಿ ಎದುರು ಇರುವ ಸುಶೀಲ ಅವರ ತಂದೆಗೆ ಸೇರಿದ ಜಾಗದ ಗಡಿಗೆ ಸಂಬಂಧಿಸಿ ಮುದ್ದು ನಾಯ್ಕ ಎಂಬಾತನೊಂದಿಗೆ ತಕರಾರು ಇದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುತ್ತದೆ.
ಜು.23 ರಂದು ಸಂಜೆ ಸುಶೀಲ ಹಾಗೂ ಅವರ ಮಗಳು ಶಮಿತಾ ಅವರು ಮನೆಯ ಹಿಂಬದಿ ಹೋದಾಗ ಅಂಗಡಿಯಲ್ಲಿದ್ದ ಆಪಾದಿತ ಮುದ್ದು ನಾಯ್ಕನಲ್ಲಿ ಬೇಲಿಗೆ ಕಟ್ಟಿದ ಬಟ್ಟೆಯನ್ನು ತುಂಡು ಮಾಡಿದ್ದು ಯಾಕೆ ಎಂದು ಕೇಳಿದ್ದಾರೆ. ಇದಕ್ಕೆ ಆಪಾದಿತ ಮುದ್ದು ನಾಯ್ಕ ಕೋಲು ಎಸೆದು ಬೈದು ಹಲ್ಲೆ ಮಾಡಿದ್ದಾನೆ. ಮಾತ್ರವಲ್ಲದೆ ಸುಶೀಲ ಅವರು ಧರಿಸಿದ್ದ ಬಟ್ಟೆ ಪಟ್ಟಿ ಹಿಡಿದು ಎಳೆದಾಡಿದ್ದು ಇದರಿಂದ ಬಟ್ಟೆ ಹರಿದಿರುತ್ತದೆ. ಈ ವೇಳೆ ಅವರು ಕಿರುಚಾಡಿದಾಗ ಸುಶೀಲ ಅವರ ದೊಡ್ಡಮ್ಮನ ಮಗ ಬಾಲಕೃಷ್ಣ ಎಂಬವರು ಬಂದು ಉಪಚರಿಸಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.