ಸುಶಾಂತ್ ಪ್ರಕರಣ: ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್‌ ಆದೇಶ

ನವದೆಹಲಿ: ಜೂನ್‌ 14ರಂದು ಮುಂಬೈ ಬಾಂದ್ರಾದ ನಿವಾಸದಲ್ಲಿ ನಟ ಸುಶಾಂತ್‌ ಸಿಂಗ್‌ ರಜಪೂತ್‌ (34) ನೇಣು ಬಿಗಿದ ಸ್ಥಿತಿಯಲ್ಲಿ ಸಾವಿಗೀಡಾಗಿದ್ದರು. ಆ ನಿಗೂಢ ಸಾವಿನ ತನಿಖೆಯನ್ನು ಸಿಬಿಐ ಮುಂದುವರಿಸಲು ಸುಪ್ರೀಂ ಕೋರ್ಟ್‌ ಬುಧವಾರ ಅನುಮತಿ ನೀಡಿದೆ.

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಸಂಬಂಧ ಪಟ್ನಾದಲ್ಲಿ ದಾಖಲಾಗಿರುವ ಎಫ್ಐಆರ್ ಅನ್ನು ಮುಂಬೈಗೆ ವರ್ಗಾಯಿಸಲು ಕೋರಿ ನಟಿ ರಿಯಾ ಚಕ್ರವರ್ತಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ಕೋರ್ಟ್‌ ಆದೇಶ ಪ್ರಕಟಿಸಿದೆ.

ನ್ಯಾಯಮೂರ್ತಿ ಹೃಷಿಕೇಶ್ ರಾಯ್‌ ಅವರಿದ್ದ ಏಕಸದಸ್ಯ ಪೀಠವು ಆದೇಶ ಪ್ರಕಟಿಸಿತು. ಸಿಬಿಐ ತನಿಖೆ ನಡೆಸುವಂತೆ ಕೋರ್ಟ್‌ ಆದೇಶಿಸುತ್ತಿದ್ದು, ಮಹಾರಾಷ್ಟ್ರ ಸರ್ಕಾರ ಸಿಬಿಐ ತನಿಖೆಗೆ ಸಹಕರಿಸಬೇಕು ಎಂದು ಕೋರ್ಟ್‌ ಹೇಳಿತು.

ಸುಶಾಂತ್‌ ತಂದೆ ಕೆ.ಕೆ.ಸಿಂಗ್ ಅವರ ದೂರು ಆಧರಿಸಿ ಪಟ್ನಾ ಪೊಲೀಸರು ಜುಲೈ 25ರಂದು ಎಫ್‌ಐಆರ್‌ ದಾಖಲಿಸಿದ್ದು ಸಮಂಜಸವಾದುದು. ಮುಂಬೈ ಪೊಲೀಸರು ಪ್ರಕರಣದ ಸಂಬಂಧ ಎಫ್‌ಐಆರ್‌ ದಾಖಲಿಸದೆ ಕೇವಲ ವಿಚಾರಣೆಯನ್ನಷ್ಟೇ ಮುಂದುವರಿಸಿದ್ದನ್ನು ಕೋರ್ಟ್‌ ಪ್ರಸ್ತಾಪಿಸಿತು.

ಮುಂದಿನ ದಿನಗಳಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಹೊಸ ದೂರು ದಾಖಲಿಸುವುದಿದ್ದರೂ ಸಿಬಿಐಗೆ ತಿಳಿಸಬೇಕು. ಸಿಬಿಐ ತನಿಖೆ ನಡೆಸಲು ವಿನಂತಿಸುವ ಅಧಿಕಾರ ಬಿಹಾರ ಸರ್ಕಾರಕ್ಕೆ ಇದೆ ಎಂದು ಕೋರ್ಟ್‌ ಪ್ರಕಟಿಸಿತು. 35 ಪುಟಗಳ ಆದೇಶ ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!