ಕಂಬಳ ಓಟಗಾರನ ತೇಜೋವಧೆ- ಲೋಕೇಶ್ ಶೆಟ್ಟಿ ವಿರುದ್ಧ ಮಾನನಷ್ಟ ಮೊಕದ್ದಮೆಗೆ ನಿರ್ಧಾರ

ಲೋಕೇಶ್ ಶೆಟ್ಟಿ ಮುಚ್ಚೂರು

ಮಂಗಳೂರು, ಜು.23: ಕಂಬಳ ಓಟಗಾರನಾಗಿರುವ ನನ್ನ ವಿರುದ್ಧ ಲೋಕೇಶ್ ಶೆಟ್ಟಿ ಮುಚ್ಚೂರು ಎಂಬಾತ ಸುಳ್ಳು ದೂರು ದಾಖಲಿಸಿ ತೇಜೋವಧೆ ಮಾಡುತ್ತಿದ್ದು, ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದೇನೆ ಎಂದು ಕಂಬಳ ಓಟಗಾರ ಶ್ರೀನಿವಾಸ ಗೌಡ ಹೇಳಿದ್ದಾರೆ.

ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕೇಶ್ ಶೆಟ್ಟಿಯವರು 2020ರಲ್ಲಿ ಕಂಬಳ ಕುರಿತಾಗಿ ಸಿನಿಮಾ ಮಾಡುತ್ತಿದ್ದು, ನನ್ನನ್ನು ಪಾತ್ರ ಮಾಡಲು ಕೇಳಿಕೊಂಡಿದ್ದರು. ಆದರೆ ಅವರ ಚಟುವಟಿಕೆಗಳ ಬಗ್ಗೆ ನನಗೆ ಮೊದಲೇ ಗೊತ್ತಿದ್ದುದ್ದರಿಂದ ನಾನು ಪಾತ್ರ ಮಾಡಲು ಒಪ್ಪಿರಲಿಲ್ಲ. ನನ್ನ ವಿರೋಧ ಇದ್ದರೂ 2020 ರ ಫೆ.20ರಂದು ಪತ್ರಿಕೆಗಳಲ್ಲಿ ನನ್ನ ಭಾವಚಿತ್ರ ಸಹಿತ ಸಿನಿಮಾ ಹೊರತರುವ ಕುರಿತಂತೆ ಹೇಳಿಕೆ ನೀಡಿದ್ದರು. ಬಳಿಕ ಪದೇ ಪದೇ ಕಿರುಕುಳ ನೀಡುತ್ತಿದ್ದರು. ಕಂಬಳ ಕ್ಷೇತ್ರದಲ್ಲಿ ನನಗಿರುವ ಹೆಸರನ್ನು ಹಾಳು ಮಾಡುವ ಎಲ್ಲಾ ಪ್ರಯತ್ನ ಮಾಡಿದ್ದಾರೆ. ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸಿದ್ದಾರೆ. ನನ್ನ ವಿರುದ್ಧದ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ನ್ಯಾಯಕ್ಕಾಗಿ ಮಾನನಷ್ಟ ಮೊಕದ್ದಮೆ ಅನಿವಾರ್ಯವಾಗಿದೆ ಎಂದರು.

ನಾನು ಕಂಬಳ ಅಕಾಡೆಮಿಯಿಂದ 2011ರಲ್ಲಿ ತರಬೇತಿ ಪಡೆದು ಕಂಬಳ ಕೂಟಗಳಲ್ಲಿ ಕೋಣಗಳನ್ನು ಓಡಿಸಿ ಈವರೆಗೆ ಹಲವಾರು ಬಹುಮಾನಗಳನ್ನು ಪಡೆದುಕೊಂಡಿದ್ದೇನೆ. ಕರ್ನಾಟಕ ಸರಕಾರ ಕೂಡ ನನ್ನನ್ನು ಗುರುತಿಸಿ ರೂ.1 ಲಕ್ಷ ನಗದಿನೊಂದಿಗೆ ಕ್ರೀಡಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಕಾರ್ಮಿಕ ಇಲಾಖೆಯಿಂದಲೂ 3 ಲಕ್ಷ ನಗದು ಸೇರಿದಂತೆ ಗೌರವ ದೊರೆತಿದೆ. ಇವೆಲ್ಲದನ್ನು ಸಹಿಸಲಾಗದ ಮಂದಿ ತನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಹೊರಿಸುತ್ತಿದ್ದಾರೆ. ಇದರಿಂದ ನೊಂದಿದ್ದು, ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದೇನೆ ಎಂದರು.

ಇದೇ ವೇಳೆ ಕಂಬಳದ ಪ್ರಮುಖರಾದ ರಶ್ಮಿತ್ ಶೆಟ್ಟಿ ಮಾತನಾಡಿ, ಬಡ ಕುಟುಂಬದಿಂದ ಬಂದಂತಹ ಓರ್ವ ಕಂಬಳ ಪ್ರೇಮಿ ಓಟಗಾರನಿಗೆ ಈ ರೀತಿಯ ಅನ್ಯಾಯ ಆಗಲು ಬಿಡುವುದಿಲ್ಲ. ಶೀಘ್ರವೇ ಕಂಬಳ ಸಮಿತಿಯ ಸಭೆ ಕರೆಯಲು ಒತ್ತಾಯಿಸಲಾಗುವುದು. ಸಭೆಯಲ್ಲಿ ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲು ಸೂಚಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಕಂಬಳದ ಪ್ರಮುಖರಾದ ಹರ್ಷವರ್ಧನ ಪಡಿವಾಳ್, ಶಕ್ತಿಪ್ರಸಾದ್ ಶೆಟ್ಟಿ, ಸಚಿನ್ ಅಡಪ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!