ಗೆಟ್-ಟುಗೆದರ್ ವೀಡಿಯೊ ಬಳಸಿ ಇಬ್ಬರ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ- 8 ಅಪ್ರಾಪ್ತರು ವಶಕ್ಕೆ
ಮಂಗಳೂರು: ಇಬ್ಬರು ವಿದ್ಯಾರ್ಥಿಗಳು ಚುಂಬಿಸುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಪ್ರತಿಷ್ಠಿತ ಕಾಲೇಜಿನ 8 ಅಪ್ರಾಪ್ತ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮಂಗಳೂರಿನ ಸೆಂಟ್ ಅಲೋಶಿಯಸ್ ಕಾಲೇಜಿನ ಎಂಟು ಹದಿಹರೆಯದವರನ್ನು ವಶಕ್ಕೆ ತೆಗೆದುಕೊಂಡು ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ವೈರಲ್ ಆಗಿದ್ದ ಕಿಸ್ಸಿಂಗ್ ವಿಡಿಯೋವನ್ನು ಆರು ತಿಂಗಳ ಹಿಂದೆ ಚಿತ್ರೀಕರಿಸಲಾಗಿದ್ದು, ಇತ್ತೀಚೆಗೆ ಅಪ್‌ಲೋಡ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚುಂಬನದ ವೀಡಿಯೊದಲ್ಲಿ ಕಂಡುಬರುವ ಹುಡುಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಮಂಗಳೂರಿನ ಲೈಟ್ ಹೌಸ್ ಹಿಲ್ ರೋಡ್ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ಚಿತ್ರೀಕರಿಸಲಾದ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಇಬ್ಬರು ಹುಡುಗಿಯರಲ್ಲಿ ಈಕೆಯೂ ಒಬ್ಬಳು.
ತನಗೆ ಆ ಅಪಾರ್ಟ್‌ಮೆಂಟ್‌ನಲ್ಲಿರುವ ಹುಡುಗರ ಪರಿಚಯವಿತ್ತು. ವಿಡಿಯೋದಲ್ಲಿರುವ ಒಬ್ಬನ ಜೊತೆ ತನಗೆ ದೈಹಿಕ ಸಂಬಂಧವಿತ್ತು ಎಂದು ಹುಡುಗಿ ಪೊಲೀಸರಿಗೆ ತಿಳಿಸಿದ್ದಾಳೆ. ಇತರೆ ಹುಡುಗರು ವಿಡಿಯೋ ಬಳಸಿ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಆರೋಪಿಗಳ ಪೈಕಿ 17 ವರ್ಷದ ಬಾಲಕ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಅಪ್ಲೋಡ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಫೆಬ್ರವರಿಯಲ್ಲಿ ವಿದ್ಯಾರ್ಥಿಗಳು ಅಪಾರ್ಟ್‌ಮೆಂಟ್‌ನಲ್ಲಿ ಒಟ್ಟಿಗೆ ಸೇರಿದ್ದು ಮುತ್ತಿಡುವುದು “ಟ್ರೂಥ್ ಅಂಡ್ ಡೇರ್” ಆಟದ ಭಾಗವಾಗಿತ್ತು. ವೀಡಿಯೋದಲ್ಲಿ ಹುಡುಗ ಮತ್ತು ಹುಡುಗಿ ಇಬ್ಬರೂ ಸಮವಸ್ತ್ರದಲ್ಲಿ ಚುಂಬಿಸುತ್ತಿದ್ದು ಅವರ ಸ್ನೇಹಿತರು ಅವರನ್ನು ಹುರಿದುಂಬಿಸುತ್ತಿದ್ದರು. ಪೋಲೀಸರ ಪ್ರಕಾರ, ಎಲ್ಲಾ ಎಂಟು ಹುಡುಗರು ಈ ಗೆಟ್-ಟುಗೆದರ್ ಸಮಯದಲ್ಲಿ ತೆಗೆದ ವೀಡಿಯೊ ತುಣುಕುಗಳನ್ನು ಬಳಸಿಕೊಂಡು ಇಬ್ಬರು ಹುಡುಗಿಯರ ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ. ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು ಮತ್ತು ಅಂತಹ “ಅತಿ ಅಶಿಸ್ತು ಮತ್ತು ದುರ್ನಡತೆ” ಪ್ರಕರಣಗಳನ್ನು ಪೊಲೀಸರ ಗಮನಕ್ಕೆ ತರಬೇಕು ಎಂದು ಅವರು ಹೇಳಿದ್ದಾರೆ. 8 ವಿದ್ಯಾರ್ಥಿಗಳ ವಿರುದ್ಧ ಪೋಕ್ಸೊ ಕಾಯ್ದೆ ಮತ್ತು ಐಟಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.ಕಾಲೇಜು ಆಡಳಿತ ಮಂಡಳಿಗೆ ಘಟನೆ ಗೊತ್ತಿದ್ದರೂ ಗಮನಕ್ಕೆ ತಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.