ಗೋಮಾಳ ಜಾಗ ಒತ್ತುವರಿ ವಿರುದ್ಧ ಕ್ರಮಕ್ಕೆ ತಾ.ಪಂ. ಸೂಚನೆ
ಮಂಗಳೂರು: ಮಂಗಳೂರು ತಾಲೂಕಿನಲ್ಲಿ ಗೋಮಾಳ ಜಾಗ ಒತ್ತುವರಿ ಮಾಡಿರುವವರ ವಿರುದ್ಧ ಕ್ರಮ ಕೈಗೊಂಡು, ಒತ್ತುವರಿ ತೆರವು ಮಾಡುವಂತೆ ಮಂಗಳೂರು ತಾಲೂಕು ಪಂಚಾಯತ್ ಸಭೆಯಲ್ಲಿ ಆಗ್ರಹಿಸಲಾಗಿದೆ.
ಮಂಗಳವಾರ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಈ ಬಗ್ಗೆ ಒತ್ತಾಯ ಮಾಡಿದರು. ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಇದಕ್ಕೆ ಉತ್ತರಿಸಿ, ಗೋಮಾಳ ಜಾಗಗಳನ್ನು ಭೂದಾಖಲೆಗಳೊಂದಿಗೆ ಗುರುತಿಸಿ, ಸರ್ವೇ ಮಾಡಲಾಗುವುದು. ಒತ್ತುವರಿ ಮಾಡಿಕೊಂಡವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಂಗಳೂರು ತಾಲೂಕಿನಿಂದ ವಿಭಜನೆಗೊಂಡು ನೂತನವಾಗಿ ರಚನೆವಾಗಿರುವ ಮೂಡಬಿದ್ರೆ ತಾಲೂಕಿಗೆ ಸರ್ಕಾರದಿಂದ ರೂ.10 ಕೋಟಿ ಅನುದಾನ ಬಿಡುಗಡೆಯಾಗಿದ್ದು ಇದರಿಂದ ತಾಲೂಕಿನ ಅಭಿವೃದ್ಧಿಗೆ ಸಹಾಯವಾಗಿದೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು ತಿಳಿಸಿದ್ದಾರೆ. ಹೊಸದಾಗಿ ರಚನೆಗೊಂಡಿರುವ ಮೂಡಬಿದ್ರೆ ತಾಲೂಕಿಗೆ ಮಂಗಳ್ರರು ತಾಲೂಕು ಪಂಚಾಯತ್‍ನಿಂದ 8 ಸದಸ್ಯರು ಈಗಾಗಲೇ ವರ್ಗಾವಣೆಗೊಂಡಿದ್ದು, ಸದಸ್ಯರು ನೂತನ ತಾಲೂಕನ್ನು ಉತ್ತಮವಾಗಿ ಅಭಿವೃದ್ಧಿ ಕಾಣುವಂತೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಮಾತನಾಡಿ, ಗುರುಪುರದಲ್ಲಿ ಈ ಹಿಂದೆ ಗುಡ್ಡ ಕುಸಿತದಿಂದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಇಂತಹ ಈ ಘಟಣೆಯು ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಮತ್ತೊಂದು ಬಾರಿ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಗುಡ್ಡ ಕುಸಿತದ ಸ್ಥಳದಲ್ಲಿ 73 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದ್ದು, ಅವರಿಗೆ ಬಾಡಿಗೆಗೆ ಪತ್ರಿ ತಿಂಗಳು ರೂ. 2500 ನೀಡಲಾಗುತ್ತಿದೆ. ತಾಲೂಕಿನ 3 ಕಡೆಯಲ್ಲಿ 69 ಮನೆಗಳನ್ನು ಅಪಾರ್ಟ್‍ಮೆಂಟ್ ರೂಪದಲ್ಲಿ ನಿರ್ಮಾಣ ಮಾಡಿಕೊಡಲಾಗುವುದು. ತಾಲೂಕು ವ್ಯಾಪ್ತಿಯಲ್ಲಿ ಎನ್‍ಐಟಿಕೆ ತಂಡವು ನಡೆಸಿದ ಸರ್ವೇಯಲ್ಲಿ 200 ರಿಂದ 260 ಮನೆಗಳು ಅಪಾಯದ ಪ್ರದೇಶದಲ್ಲಿ ಇದ್ದು, ಅವುಗಳನ್ನು ಅದಷ್ಟು ಬೇಗನೆ ಸ್ಥಳಾಂತರ ಮಾಡುವುವಂತೆ ಸೂಚಿಸಲಾಗಿದೆ. ಅಂತಹ ಮನೆಗಳನ್ನು ಶೀಘ್ರದಲ್ಲಿ ಸ್ಥಳಾಂತರ ಮಾಡಲಾಗುವುದು ಎಂದು ತಿಳಿಸಿದರು.
ಗಂಜಿಮಠ-ಕುಪ್ಪೆಪದವು ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸೇತುವೆ ನಿರ್ಮಾಣ ಹಾಗೂ ರಸ್ತೆ ಅಗಲೀಕರಣ ಕೆಲವು ಪ್ರಗತಿಯಲ್ಲಿದ್ದು ಅದಷ್ಟು ಬೇಗನೇ ಪೂರ್ಣಗೊಳ್ಳಲಿದೆ. ರಾಜೀವ ಗಾಂಧಿ ವಸತಿ ನಿಗಮದ ಮಾರ್ಗಸೂಚಿಯಂತೆ ಸಂಬಂಧಪಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ನಿವೇಶನವನ್ನು ಅದೇ ಗ್ರಾಮದ ಅರ್ಹ ಫಲಾನುಭವಿಗಳಿಕೆ ಮಾತ್ರ ಹಂಚಿಕೆ ಮಾಡಲಾಗುತ್ತದೆ. ಬೇರೆ ಗ್ರಾಮ ಪಂಚಾಯತ್ ಫಲಾನುಭವಿಗಳಿಗೆ ಹಂಚಿಕೆ ಸಾಧ್ಯವಿಲ್ಲ ಎಚಿದರು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಪಿಂಚಣಿ ಫಲಾನುಭವಿಗಳಿಗೆ ವೇತನವನ್ನು ಆನ್‍ಲೈನ್ ಮೂಲಕ ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುವುದು. ಫಲಾನುಭವಿಗಳಿಗೆ ತಮ್ಮ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಕಚೇರಿಗೆ ಬರುವ ಅಗತ್ಯವಿಲ್ಲ. ಬ್ಯಾಂಕ್ ಪಾಸ್ ಬುಕ್ ಮತ್ತು ಆಧಾರ್ ಕಾರ್ಡ್‍ಗಳನ್ನು ವಾಟ್ಸಾಪ್ ಮುಖಾಂತರ ಕಳುಹಿಸಿ ಕೊಟ್ಟರೆ ಇಲಾಖೆಯಿಂದ ಲಿಂಕ್ ಮಾಡಿಕೊಡಲಾಗುವುದು. ಕೆಲವೊಂದು ಗ್ರಾಮ ಪಂಚಾಯತ್‍ಗಳ ಮಧ್ಯೆ ತಕರಾರು ಅರ್ಜಿಗಳು ಇವೆ ಅವುಗಳನ್ನು ಅದಷ್ಟು ಬೇಗನೆ ಸರ್ವೇ ನಡೆಸಿ ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಮಂಗಳೂರು ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಪೂರ್ಣಿಮಾ, ಕಾರ್ಯನಿರ್ವಹಣಾಧಿಕಾರಿ ಸದಾನಂದ, ತಾ.ಪಂ. ಸದಸ್ಯರು, ವಿವಿಧ ಗ್ರಾಮ ಪಂಚಾಯತ್ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದರು.