ದೊಡ್ಡ ಜನ ಉದ್ಘಾಟಿಸಿದ್ದ ಎಕ್ಸ್ ಪ್ರೆಸ್‍ ವೇ- ಭ್ರಷ್ಟಾಚಾರದ ದೊಡ್ಡ ಹೊಂಡವೇ ಹೊರಬಂತು- ಅಖಿಲೇಶ್ ಯಾದವ್

ಹೊಸದಿಲ್ಲಿ : 15,000 ಕೋಟಿ ರೂ. ಎಕ್ಸ್ ಪ್ರೆಸ್‍ ವೇಗೆ 5 ದಿನಗಳ ಮಳೆಯನ್ನೂ ತಾಳಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಬುಂದೇಲ್ಖಂಡ್ ಎಕ್ಸ್ ಪ್ರೆಸ್‍ ವೇ ಯ ಒಂದು ಭಾಗದಲ್ಲಿ ರಸ್ತೆ ಬಿರುಕು ಬಿದ್ದಿರುವ ಬಗ್ಗೆ ಸ್ವತಃ ಬಿಜೆಪಿ ಸಂಸದ ವರುಣ್ ಗಾಂಧಿ ಅವರು  ಟೀಕಿಸಿದ್ದಾರೆ.

ತಮ್ಮದೇ ಪಕ್ಷವನ್ನು ಟೀಕಿಸಿರುವ ಅವರು, ಹಾಳಾಗಿರುವ ಎಕ್ಸ್ ಪ್ರೆಸ್ ವೇ ಭಾಗದ ಒಂದು ವೀಡಿಯೋ ಟ್ವೀಟ್ ಮಾಡಿ “ರೂ 15,000 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಎಕ್ಸ್‍ಪ್ರೆಸ್‍ವೇಗೆ ಐದು ದಿನಗಳ ಮಳೆಯನ್ನೂ ತಾಳಿಕೊಳ್ಳಲು ಸಾಧ್ಯವಿಲ್ಲವೆಂದಾದರೆ, ಗುಣಮಟ್ಟದ ಗಂಭೀರ ಪ್ರಶ್ನೆಗಳನ್ನು ಎತ್ತಿದೆ”‌ ಎಂದು ಬರೆದು ಕೊಂಡಿದ್ದಾರೆ.

ಈ 296 ಕಿಮೀ ಉದ್ದದ ಬುಂದೇಲ್ಖಂಡ್ ಎಕ್ಸ್‍ಪ್ರೆಸ್‍ವೇ ಯ ಕೆಲ ಭಾಗಗಳು ಜಲೌನ್ ಜಿಲ್ಲೆಯ ಛಿರಿಯಾ ಸೇಲಂಪುರ್ ಎಂಬಲ್ಲಿ ಕುಸಿದಿದೆಯಲ್ಲದೆ ಹಲವಾರು ಹೊಂಡಗಳು ರಸ್ತೆಯಲ್ಲಿ ನಿರ್ಮಾಣವಾಗಿದೆ.ಈ ರಸ್ತೆ ನಿರ್ಮಾಣದ ಜವಾಬ್ದಾರಿ ಹೊತ್ತ ಅಧಿಕಾರಿಗಳು ಮತ್ತು ಕಂಪೆನಿಗಳನ್ನು ಕರೆಸಿ ಅವರ ವಿರುದ್ಧ ಕ್ರಮಕೈಗೊಳ್ಳ ಬೇಕೆಂದು ಅವರು ಆಗ್ರಹಿಸಿದ್ದಾರೆ.

ಇನ್ನು ಈ ವಿಚಾರವಾಗಿ ಬಿಜೆಪಿಯನ್ನು ಟೀಕಿಸಿರುವ ಉತ್ತರ ಪ್ರದೇಶ ಕಾಂಗ್ರೆಸ್ ‘ಹೊಂಡ-ಮುಕ್ತ’ ರಸ್ತೆ ನೀಡುವ ಭರವಸೆ ನೀಡಿದವರಿಂದ ನಿರ್ಮಾಣವಾಗಿರುವ ಈ ಎಕ್ಸ್ ಪ್ರೆಸ್‍ ವೇ ಈಗ ಹೊಂಡಗುಂಡಿಗಳಿಂದ ತುಂಬಿದೆ ಎಂದು ಎಂದು ವ್ಯಂಗ್ಯವಾಡಿದೆ.

ಈ ವಿಚಾರವಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಟ್ವೀಟ್ ಮೂಲಕ  ಪ್ರತಿಕ್ರಿಯೆ ನೀಡಿ “ಬಿಜೆಪಿಯ ಅರೆ-ಮನಸ್ಸಿನ ಅಭಿವೃದ್ಧಿಯ ಗುಣಮಟ್ಟದ ಒಂದು ಸ್ಯಾಂಪಲ್ ಇದಾಗಿದೆ,” “ಬುಂದೇಲ್ಖಂಡ್ ಎಕ್ಸ್‍ಪ್ರೆಸ್‍ವೇ ಅನ್ನು ದೊಡ್ಡ ಜನರು ಉದ್ಘಾಟಿಸಿದ್ದರು ಹಾಗೂ ಒಂದೇ ವಾರದಲ್ಲಿ ಭ್ರಷ್ಟಾಚಾರದ ದೊಡ್ಡ ಹೊಂಡವೇ ಅದರಿಂದ ಹೊರಬಂತು”ಎಂದು ಅವರು ಹೇಳಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು,’ ಹೊಸ ರಸ್ತೆ ಹಾನಿಗೊಂಡ ಕೂಡಲೇ ಸ್ಥಳಕ್ಕೆ ಹಲವಾರು ಬುಲ್‍ಡೋಝರ್‍ಗಳು ಆಗಮಿಸಿದ್ದವು ಹಾಗೂ ರಸ್ತೆಯನ್ನು ತಕ್ಷಣ ದುರಸ್ತಿಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!