ಅನ್ಯಾಯ, ಶೋಷಿತರ ಪರ ಹೋರಾಟದ ಧ್ವನಿ ಮೊಟಕುಗೊಳಿಲು ಬಿಜೆಪಿ ಅಧಿಕಾರ ದುರುಪಯೋಗ- ಯು.ಟಿ ಖಾದರ್
ಬ್ರಹ್ಮಾವರ ಜು.22 (ಉಡುಪಿ ಟೈಮ್ಸ್ ವರದಿ): ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಅಖಿಲ ಭಾರತ ಕಾಂಗ್ರೇಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಕೇಂದ್ರ ಸರಕಾರದ ಅಧೀನದ ಇಡಿ ಇಲಾಖೆ ಮೂಲಕ ತನಿಖೆಯ ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಇಂದು ಬ್ರಹ್ಮಾವರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
ಬ್ರಹ್ಮಾವರದಲ್ಲಿ ನಡೆದ ರ್ಯಾಲಿಯು ಹೋಲಿ ಫ್ಯಾಮಿಲಿ ಚರ್ಚ್ ಬಳಿಯಿಂದ ಸಾಗಿ ಬಂದು ಬಸ್ ನಿಲ್ದಾಣದ ಬಳಿ ಸಮಾಪ್ತಿಗೊಂಡಿತು. ಬಳಿಕ ನಡೆದ ಸಭೆಯಲ್ಲಿ ಶಾಸಕ ಯು.ಟಿ ಖಾದರ್ ಅವರು ಮಾತನಾಡಿ, ಕಾಂಗ್ರೆಸ್ ನ ಧ್ವನಿಯನ್ನು ಅಡಗಿಸಬೇಕು ಎಂಬ ಉದ್ದೇಶದಿಂದ ಬಿಜೆಪಿ ಸರಕಾರ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಗಾಂಧಿ ಕುಟುಂಬ ಇಂದು ಅನ್ಯಾಯ ಮತ್ತು ಶೋಷಿತರ ಪರ ಹೋರಾಟ ಮಾಡುವ ಸಂದರ್ಭದಲ್ಲಿ ಜನ ಸಾಮಾನ್ಯರ ಧ್ವನಿ ಮೊಟಕು ಗೊಳಿಸಬೇಕು ಎಂಬ ಉದ್ದೇಶದಿಂದ ಸೋನಿಯಾ ಗಾಂಧಿ ಅವರಿಗೆ ಇಡಿ ಮೂಲಕ ನೋಟಿಸ್ ನೀಡಲಾಗಿದೆ. ಹಾಗೂ ಆಡಳಿತ ಬಿಜೆಪಿ ಪಕ್ಷ ಗಾಂಧೀ ವಂಶವನ್ನು ಮತ್ತು ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡುವ ಹಲವಾರು ವಾಮ ಮಾರ್ಗದ ಮೂಲಕ ಮಾಡುತ್ತಿರುವ ಸಂಚಿನಲ್ಲಿ ದೇಶಕ್ಕೆ ಹಲವಾರು ಕೊಡುಗೆಯನ್ನು ನೀಡಿದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಕಿರುಕುಳ ನೀಡಿ ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡುತ್ತಿದೆ. ಯಾವೂದೇ ಪೋಲೀಸ್ ಠಾಣೆಯಲ್ಲಿ ಅವರ ವಿರುದ್ಧ ಕೇಸು ಆಗಲಿ ಅಪರಾಧವಾಗಲಿ, ದಾಖಲಾಗದೆ ದಿನ ಗಟ್ಟಲೆ ಅವರನ್ನು ಅಪರಾಧಿ ಸ್ಥಾನದಲ್ಲಿ ಕುಳ್ಳಿರಿಸಿದೆ. ಈ ಮೂಲಕ ಬಿಜೆಪಿ ದಬ್ಬಾಳಿಕೆ ನೀತಿ ಅನುಸರಿಸುತ್ತಿದೆ ಎಂದರು.
ಇದೇ ವೇಳೆ ಪಿಎಸ್ ಐ ನಲ್ಲಿ ನಡೆದಿರುವ ಅಕ್ರಮದ ಬಗ್ಗೆ ಕೇಸ್ ಹಾಕಿ ಡಿಜಿಪಿಯನ್ನು ಬಂಧಿಸಿದರೂ ಎರಡು ಗಂಟೆಗಿಂತ ಹೆಚ್ಚು ಚರ್ಚೆ ನಡೆಸಿಲ್ಲ ಎಂದು ಅವರು ಆರೋಪಿಸಿದರು. ಈ ಸಂದರ್ಭ ಪ್ರತಿಭಟನೆಯಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಅಭಯ ಚಂದ್ರ ಜೈನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ಪ್ರಮುಖರಾದ ವೆರೊನಿಕಾ ಕರ್ನೆಲಿಯೋ, ಎಂ.ಎ ಗಫೂರ್, ಕೃಷ್ಣಮೂರ್ತಿ ಆಚಾರ್ಯ, ರಮೇಶ್ ಕಾಂಚನ್, ಸೌರಭ್ ಬಲ್ಲಾಳ್, ದಿನಕರ ಹೇರೂರು, ಭುಜಂಗ ಶೆಟ್ಟಿ ಹಾಗೂ ಜಿಲ್ಲೆಯ ನಾನಾ ಭಾಗದ ಕಾಂಗ್ರೆಸ್ ಮುಖಂಡರು ಭಾಗವಹಿಸಿದರು.