ಅವಿವಾಹಿತ ಮಹಿಳೆಯ ಗರ್ಭಪಾತಕ್ಕೆ ಸುಪ್ರೀಂ ಕೋರ್ಟ್ ಅನುಮತಿ
ಹೊಸದಿಲ್ಲಿ ಜು.22: ಅವಿವಾಹಿತ ಮಹಿಳೆಗೆ ತನ್ನ 24 ವಾರಗಳ ಗರ್ಭವನ್ನು ಕೊನೆಗೊಳಿಸಲು (ಗರ್ಭಪಾತ) ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್,ಸೂರ್ಯಕಾಂತ್ ಮತ್ತು ಎಎಸ್ ಬೋಪಣ್ಣ ಅವರ ಪೀಠವು ವೈದ್ಯಕೀಯ ಗರ್ಭಪಾತ ಕಾಯ್ದೆಯ ವ್ಯಾಪ್ತಿಯನ್ನು ವಿಸ್ತರಿಸಿ, ಈ ಕಾಯ್ದೆಯಲ್ಲಿ ‘ಅವಿವಾಹಿತ ಮಹಿಳೆ’ ಯನ್ನು ಸೇರಿಸಲು ಒಪ್ಪಿಗೆ ನೀಡಿದೆ.
ಹಾಗೂ ಶುಕ್ರವಾರದೊಳಗೆ ಮಹಿಳೆಯನ್ನು ಪರೀಕ್ಷಿಸಲು ಇಬ್ಬರು ವೈದ್ಯರ ವೈದ್ಯಕೀಯ ಮಂಡಳಿಯನ್ನು ಸ್ಥಾಪಿಸಲು ಎಐಐಎಂಎಸ್ ನಿರ್ದೇಶಕರಿಗೆ ನಿರ್ದೇಶನ ನೀಡಿದೆ. ಇದರೊಂದಿಗೆ ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ (ಎಂಟಿಪಿ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಗರ್ಭಾವಸ್ಥೆಯನ್ನು ಕೊನೆಗೊಳಿಸಿದರೆ ಅದು ಮಹಿಳೆಯ ಜೀವಕ್ಕೆ ಅಪಾಯವನ್ನುಂಟು ಮಾಡಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಿ ಎಂದು ಮಂಡಳಿಗೆ ಸೂಚಿಸಿದೆ.2021 ರಲ್ಲಿ ತಿದ್ದುಪಡಿ ಮಾಡಲಾದ ಎಂಟಿಪಿ ಕಾಯ್ದೆಯ ನಿಬಂಧನೆಗಳು ಸೆಕ್ಷನ್ 3 ರ ವಿವರಣೆಯಲ್ಲಿ “ಪತಿ” ಬದಲಿಗೆ ” ಪಾಲುದಾರ” (ಪಾರ್ಟ್ನರ್) ಪದವನ್ನು ಒಳಗೊಂಡಿವೆ ಎಂದು ಪೀಠವು ಹೇಳಿದೆ.
ಇದು ಕೇವಲ ವೈವಾಹಿಕ ಸಂಬಂಧಗಳಿಂದ ಉಂಟಾಗುವ ಸನ್ನಿವೇಶಗಳಿಗೆ ಸೀಮಿತಗೊಳಿಸಬಾರದು ಎಂಬ ಸಂಸತ್ತಿನ ಉದ್ದೇಶವನ್ನು ತೋರಿಸುತ್ತದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ. ಸುಪ್ರೀಂ ನಕಾರ ಕಾಯ್ದೆಯ ವ್ಯಾಪ್ತಿಗೆ ಅವಿವಾಹಿತ ಮಹಿಳೆಯನ್ನು ಸೇರಿಸುವ ಉದ್ದೇಶದಿಂದ ಸಂಸತ್ ನಲ್ಲಿ ‘ಪಾರ್ಟ್ನರ್’ ಶಬ್ಧವನ್ನು ತಿದ್ದುಪಡಿ ಮೂಲಕ ಸೇರಿಸಲಾಗಿದೆ ಎಂದು ಪೀಠ ಹೇಳಿದೆ.ಅರ್ಜಿದಾರರು ಅವಿವಾಹಿತ ಮಹಿಳೆ ಎಂಬ ಕಾರಣಕ್ಕೆ ಕಾನೂನಿನ ಪ್ರಯೋಜನವನ್ನು ನಿರಾಕರಿಸಬಾರದು ಎಂದು ಹೇಳಿರುವ ಪೀಠವು ಈ ಪ್ರಕರಣದಲ್ಲಿ ಮಹಿಳೆ ಐವರು ಒಡಹುಟ್ಟಿದವರಲ್ಲಿ ಹಿರಿಯಳು ಮತ್ತು ಆಕೆಯ ಪೋಷಕರು ಕೃಷಿಕರು ಎಂದು ಪೀಠವು ಗಮನಿಸಿತು. ಯಾವುದೇ ಸಮರ್ಪಕ ಜೀವನೋಪಾಯವಿಲ್ಲದೆ ಮಗುವನ್ನು ಸಾಕುವುದು ಮತ್ತು ಪೋಷಿಸುವುದು ಕಷ್ಟಕರವಾಗಿದೆ ಎಂದು ಮಹಿಳೆ ಸಲ್ಲಿಸಿದ್ದಾರೆ ಎಂಬುದಾಗಿ ತಿಳಿಸಿದೆ.ಜೂನ್ ತಿಂಗಳಿನಲ್ಲಿ ಒಮ್ಮತದ ಸಂಬಂಧದಲ್ಲಿದ್ದ ಮಹಿಳೆ ತನ್ನ ಗರ್ಭಾವಸ್ಥೆಯ ಬಗ್ಗೆ ತಿಳಿದುಕೊಂಡಿದ್ದು, ಪರೀಕ್ಷೆಯಲ್ಲಿ, ಅವಳು 22 ವಾರಗಳ ಗರ್ಭಿಣಿ ಎಂದು ಕಂಡುಬಂದಿದೆ ಮತ್ತು ಅವರು ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ನಿರ್ಧರಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.