ರಾಷ್ಟ್ರಪತಿ ಚುನಾವಣೆ: ದ್ರೌಪದಿ ಮುರ್ಮು ಭರ್ಜರಿ ಗೆಲುವು
ಹೊಸದಿಲ್ಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಗುರುವಾರ ಪ್ರತಿಸ್ಪರ್ಧಿ ಯಶವಂತ್ ಸಿನ್ಹಾ ಅವರನ್ನು ಸೋಲಿಸಿ ದೇಶದ ಪ್ರಥಮ ಪ್ರಜೆಯಾಗಿ ಗೆಲುವಿನ ನಗೆ ಬೀರಿದ್ದಾರೆ.
ಈ ಮೂಲಕ ದೇಶದ 15 ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಮುರ್ಮು ರಾಷ್ಟ್ರಪತಿ ಪದವಿಗೇರಿದ ಬುಡಕಟ್ಟು ಜನಾಂಗದ ಮೊದಲ ಮಹಿಳೆಯಾಗಿದ್ದಾರೆ. ಪ್ರತಿಭಾ ದೇವಿ ಪಾಟೀಲ್ ಬಳಿಕ ರಾಷ್ಟ್ರಪತಿಯಾಗಿ ಆಯ್ಕೆಯಾದ 2ನೇ ಮಹಿಳೆಯಾಗಿದ್ದಾರೆ.
ಮುರ್ಮು ಅವರ ತವರು ರಾಜ್ಯ ಒಡಿಶಾದ ರೈರಂಗಪುರದಲ್ಲಿನ ನಿವಾಸಿಗಳು ಈಗಾಗಲೇ ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಅವರು 20,000 ಸಿಹಿತಿಂಡಿಗಳನ್ನು ಸಿದ್ಧಪಡಿಸಿದ್ದರು. ಫಲಿತಾಂಶಗಳು ಈಗಾಗಲೇ ಹೊರ ಬಂದಿದ್ದು, ಬುಡಕಟ್ಟು ನೃತ್ಯ ಹಾಗೂ ವಿಜಯದ ಮೆರವಣಿಗೆಯನ್ನು ನಡೆಸಲು ಯೋಜಿಸಲಾಗಿದೆ.