ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಸುತ್ತ ಪರಿಸರ ಸೂಕ್ಷ್ಮ ವಲಯ ಘೋಷಣೆ

ಕಾರ್ಕಳ: (ಉಡುಪಿ ಟೈಮ್ಸ್ ವರದಿ)ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಸುತ್ತಾ ಪರಿಸರ ಸೂಕ್ಷ್ಮ ವಲಯವನ್ನು ಪರಿಸರ ಸಂರಕ್ಷಣಾ ಕಾಯ್ದೆ 1986 ರ ಸೆಕ್ಷನ್ 3 ರಂತೆ ಭಾರತ ಸರ್ಕಾರದ ಅರಣ್ಯ ಪರಿಸರ ಸಚಿವಾಲಯವು ಜುಲೈ 2 ರಂದು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಪರಿಸರ ಸೂಕ್ಷ್ಮ ವಲಯದ ಗಡಿ ಎಂದು ಗುರುತಿಸಿ ಆದೇಶಿಸಿದೆ.


ಕುದುರೆಮುಖ ರಾಷ್ಟ್ರೀಯ ಉದ್ಯಾನವನವು ಪಶ್ಚಿಮ ಘಟ್ಟಗಳ ಹೃದಯಭಾಗದಲ್ಲಿರುವ “ಯುನೆಸ್ಕೋ” ಮಾನ್ಯತೆ ಪಡೆದ ವಿಶ್ವ ನೈಸರ್ಗಿಕ ಪರಂಪರೆಯ ತಾಣವಾಗಿದೆ ಹಾಗೂ ಅನೇಕ ಅಳಿವಿನ ಅಂಚಿನಲ್ಲಿರುವ ಮತ್ತು ಅಪರೂಪದ ಪ್ರಾಣಿಗಳ  ಅವಾಸ ತಾಣವಾಗಿರುತ್ತದೆ. ಸಿಂಹ ಬಾಲದ ಕೋತಿ, ಮಲಬಾರ್ ಡ್ಯಾನ್ಸಿಂಗ್ ಕಪ್ಪೆಗಳು, ಅನೇಕ ಸ್ಥಳೀಯ ಆರ್ಕಿಡ್‌ಗಳು ಮತ್ತು ಇತರೆ ಸ್ಥಳೀಯ ಸಸ್ಯವರ್ಗಗಳನ್ನು ಒಳಗೊಂಡಂತೆ ಅನೇಕ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಬೇಧಗಳಿಗೆ ನೆಲೆಯಾಗಿದೆ ಅಲ್ಲದೆ ಇದು ತುಂಗಾ, ಭದ್ರಾ ಮತ್ತು ನೇತ್ರಾವತಿಯಂತಹ ಪ್ರಮುಖ ನದಿಗಳ ಮೂಲವಾಗಿದೆ.  ಇದು ವ್ಯಾಪಕವಾದ ಶೋಲಾ ಹುಲ್ಲುಗಾವಲುಗಳಿಗೆ ಹೆಸರುವಾಸಿಯಾಗಿದೆ. ನೀರಿನ ಸಂರಕ್ಷಣೆಯಲ್ಲಿ ರಾಷ್ಟ್ರೀಯ ಉದ್ಯಾನವನದ ಪಾತ್ರದಿಂದಾಗಿ ಇದನ್ನು ನೈಸರ್ಗಿಕ ಓವರ್ ಹೆಡ್  ವಾಟರ್ ಟ್ಯಾಂಕ್ ಎನ್ನುತ್ತಾರೆ.


ಈ ಸಂರಕ್ಷಿತ ಪ್ರದೇಶಗಳಿಗೆ ಕೆಲವು ರೀತಿಯ ಗಂಬೀರ ತೊಂದರೆಗಳು ಉಂಟಾಗುವುದನ್ನು ತಪ್ಪಿಸಲು ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳ ಸುತ್ತ ಪರಿಸರ ಸೂಕ್ಷ್ಮ ವಲಯಗಳೆಂದು ಘೋಷಿಸಲಾಗಿದೆ. ಮತ್ತು ಹೆಚ್ಚಿನ ರಕ್ಷಣೆ ವಲಯಗಳ ಪ್ರದೇಶಗಳಿಂದ ಕಡಿಮೆ ರಕ್ಷಣೆ ಮತ್ತು ಮನುಷ್ಯ  – ಪ್ರಾಣಿಗಳ ಸಂಘರ್ಷ ತಗ್ಗಿಸುವಿಕೆಗೆ ಸಹಾಯ ಮಾಡುವ ಪ್ರದೇಶಗಳಿಗೆ ಪರಿವರ್ತನಾ ವಲಯವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಪರಿಸರ ದುರ್ಬಲವಾಗಿರುವ ಪ್ರದೇಶಗಳನ್ನು ವಿವೇಚನೆಯಿಲ್ಲದ ಕೈಗಾರಿಕೀಕರಣದಿಂದ ಪರಸರವನ್ನು ರಕ್ಷಿಸುವ ಪ್ರಯತ್ನವಾಗಿದೆ ಮತ್ತು ಸ್ಥಳೀಯ ಸಮುದಾಯಗಳ ಚಟುವಟಿಕೆಗಳಿಗೆ ವಿರುದ್ಧವಾಗಿ ಅಲ್ಲ. ಪರಿಸರ ಸೂಕ್ಷ್ಮ ವಲಯದ ಘೋಷಣೆಯು ಭೂಮಿಯ ಮಾಲೀಕತ್ವವನ್ನು ಬದಲಾಯಿಸುವುದಿಲ್ಲ. ಕಂದಾಯ ಜಮೀನುಗಳು ಮತ್ತು ಪಟ್ಟಾ ಜಮೀನುಗಳು ಯಥಾಸ್ಥಿತಿ ಇರುತ್ತದೆ. ವಲಯದ ಒಳಗೆ ವಾಸಿಸುವ ಜನರನ್ನು ಸ್ಥಳಾಂತರಿಸಲಾಗುವುದಿಲ್ಲ. ಮತ್ತು ಅಲ್ಲಿಯೇ ವಾಸಿಸಬಹುದು ಮತ್ತು ಅಲ್ಲಿ ತಮ್ಮ ನಿಯಮಿತ ಚಟುವಟಿಕೆಗಳನ್ನು ನಿರ್ವಹಿಸಬಹುದು.

ಸಾರ್ವಜನಿಕ ಮೂಲ ಸೌಕರ್ಯ ಸೌಲಭ್ಯಗಳಾದ ವಿದ್ಯುತ್ ಮಾರ್ಗಗಳು, ಕುಡಿಯುವ ನೀರಿನ ಪೈಪ್‌ಲೈನ್‌ಗಳು, ರಸ್ತೆಗಳು, ಸೇತುವೆಗಳು ಪರಿಸರ ಸೂಕ್ಷ್ಮ ವಲಯದ ನಿಷೇಧಿತ ಚಟುವಟಿಕೆಗಳಾಗಿರುವುದಿಲ್ಲ. ಹಾಗೂ ಸ್ಥಳೀಯ ಸಮುದಾಯಗಳಿಂದ ಕೃಷಿ ಮತ್ತು ತೋಟಗಾರಿಕೆ ಪದ್ದತಿಗಳಿಗೆ ಯಾವುದೇ ನಿಷೇಧವಿಲ್ಲ.


 ಸ್ಥಳೀಯ ಸಮುದಾಯಗಳು ತಮ್ಮ ಅಮೂಲ್ಯವಾದ ನೀರಿನ ಮೂಲಗಳನ್ನು ರಕ್ಷಿಸುವ ಪರಿಸರ ಸೂಕ್ಷ್ಮ ವಲಯ ಸಹಕಾರಿಯಾಗಿರುತ್ತದೆ. ಮಾನವ ಪ್ರಚೋದಿತ ಭೂಕುಸಿತಗಳಿಂದ ರಕ್ಷಣೆ, ವಾಯು ಮಾಲಿನ್ಯ, ನೀರು ಮತ್ತು ಮಣ್ಣಿನ ಮಾಲಿನ್ಯವನ್ನು ತಪ್ಪಿಸಿ ಜನಸಾಮಾನ್ಯರ ಉತ್ತಮ ಜೀವನಕ್ಕೆ ಇದು ಸಹಾಯಕವಾಗಿದೆ    ವಾಣಿಜ್ಯ ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಹೊಸ ಸಾಮಿಲ್ಲು, ಮಾಲಿನ್ಯಕಾರಕ ಕೈಗಾರಿಕೆಗಳನ್ನು ಸ್ಥಾಪಿಸುವುದು, ನಿರ್ವಹಿಸುವುದು ಮತ್ತು ಅಪಾಯಕಾರಿ ವಸ್ತುಗಳನ್ನು ನಿರ್ವಹಿಸುವವರು, ಪ್ರಮುಖ ಜಲವಿದ್ಯುತ್ ಸ್ಥಾವರಗಳ ಸ್ಥಾಪನೆಗಳಂತಹ ದೊಡ್ಡ ಪ್ರಮಾಣ ಕೈಗಾರಿಕಾ ಚಟುವಟಿಕೆಗಳು ಪರಿಸರ ಸೂಕ್ಷ್ಮ ವಲಯದಲ್ಲಿ ಚಟುವಟಿಕೆಗಳ ನಿಷೇಧಿತ ಪಟ್ಟಿಯಲ್ಲಿದೆ.


 ವಲಯವನ್ನು ಕಂದಾಯ, ಅರಣ್ಯ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ನಗರಾಭಿವೃದ್ಧಿ ಪರಿಸರ ವಿಜ್ಞಾನದಲ್ಲಿ ಪರಿಣಿತರು, ಎನ್‌ಜಿಒ ಮತ್ತು ಮೂಡಿಗೆರೆ, ಕಾರ್ಕಳ, ಬೆಳ್ತಂಗಡಿ ಮತ್ತು ಶೃಂಗೇರಿ ಕ್ಷೇತ್ರಗಳಿಂದ ಶಾಸಕಾಂಗ ಸಭೆಯ ಗೌರವಾನ್ವಿತ ಸದಸ್ಯರನ್ನು ಒಳಗೊಂಡ ಸಮಿತಿಯಿಂದ ಜನಸಾಮಾನ್ಯರೊಂದಿಗೆ ಚರ್ಚಿಸಿ ಝೋನಲ್ ಮಾಸ್ಟರ್ ಪ್ಲಾನ್ ಸಿದ್ದಪಡಿಸಿ ನಿರ್ವಹಣೆ ಮಾಡಲಾಗುತ್ತದೆ.


 ಸ್ಥಳೀಯ ಸಾರ್ವಜನಿಕರೊಂದಿಗೆ ಚರ್ಚಿಸಿ ರಾಜ್ಯ ಸರ್ಕಾರವು ಸಿದ್ದಪಡಿಸಿರುವ ವಲಯ ಮಾಸ್ಟರ್ ಯೋಜನೆ, ಮತ್ತು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯನ್ನು ರಾಷ್ಟ್ರೀಯ ಉದ್ಯಾನವನದ ಹೊರಗೆ ಅಗತ್ಯವಿರುವ ಕನಿಷ್ಠ ಪ್ರದೇಶಕ್ಕೆ ಮಿತಿಗೊಳಿಸಿ ನಿರ್ವಹಣೆ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಪರಿಸರ ಸೂಕ್ಷ್ಮ ವಲಯದ ಗಡಿಯನ್ನು ಹಿಂದಿನ ಕರಡು ಹಂತದ 10 ಕಿ.ಮೀ. ರೇಖೆಯ ಬದಲಾಗಿ  ರಾಷ್ಟ್ರೀಯ ಉದ್ಯಾನವನದ ಗಡಿಯಿಂದ ಕೇವಲ 1 ಕಿ.ಮೀ ಮಾಡಲಾಗಿರುತ್ತದೆ ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಉಪಸಂರಕ್ಷಣಾಧಿಕಾರಿ ಕಾರ್ಕಳ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!