ಈಶ್ವರಪ್ಪಗೆ ಕ್ಲೀನ್ ಚಿಟ್-ಬಿಜೆಪಿ ಸರ್ಕಾರ ಇರುವುದೇ ಭ್ರಷ್ಟರ ರಕ್ಷಣೆಗೆ: ಕೆ.ಕೃಷ್ಣಮೂರ್ತಿ ಆಚಾರ್ಯ
ಉಡುಪಿ: ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾಜಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದ್ದು, ಆತ್ಮಹತ್ಯೆಗೆ ಮೊದಲು ಮೃತ ಸಂತೋಷ್ ಪಾಟೀಲ್ ಬರೆದಿಟ್ಟ ಪತ್ರದಲ್ಲಿ ತನ್ನ ಸಾವಿಗೆ ಸಚಿವ ಈಶ್ವರಪ್ಪನವರೇ ಕಾರಣ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹಣ ಬಿಡುಗಡೆ ಮಾಡದೆ ಇದ್ದರೆ ಆತ್ಮಹತ್ಯೆಯೊಂದೇ ಆಯ್ಕೆಯಾಗುತ್ತದೆ ಎಂದೂ ಹೇಳಿದ್ದರು. ಸಚಿವರ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಲು ಇನ್ನು ಯಾವ ಸಾಕ್ಷಿ ಬೇಕು? ಎಂದು ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಈ ಬಿಜೆಪಿ ಸರ್ಕಾರ ತಮ್ಮ ಪಕ್ಷದ ನಾಯಕ ಆರೋಪಿ ಈಶ್ವರಪ್ಪರ ರಕ್ಷಣೆ ಮಾಡಲು. ಜನರಿಗೆ ನ್ಯಾಯ ಕೊಡಬೇಕಾದ ಸರ್ಕಾರಿ ಇಲಾಖೆಗಳಿಗೆ ಒತ್ತಡ ಏರಿ ಆರೋಪಿ ಭ್ರಷ್ಟರನ್ನು ರಕ್ಷಣೆ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವರ ವಿರುದ್ಧ ಸಂತೋಷ್ ಪಾಟೀಲ್ ನೇರ ಆರೋಪ ಮಾಡಿದ್ದರು. ಸಾವಿಗೆ ಕಾರಣ ಈಶ್ವರಪ್ಪ ಅಂತ ಹೇಳಿದ್ದರು. ಅದರೆ ಬಿ-ರಿಪೋರ್ಟ್ ಹಾಕಿ ಪ್ರಕರಣವನ್ನೇ ಮುಚ್ಚಿ ಹಾಕಿದ್ದಾರೆ.
ಸಂತೋಷ್ ಪಾಟೀಲ್ ಬಿಜೆಪಿ ಕಾರ್ಯಕರ್ತ. ಅವರ ಪತ್ನಿಯೇ ನ್ಯಾಯ ಸಿಗಲ್ಲ ಅಂತ ರಾಜ್ಯಪಾಲರಿಗೆ ಪತ್ರವನ್ನು ಬರೆದಿದ್ದರು. ಬಹುಶಃ ಈಶ್ವರಪ್ಪ ಅವರು ಸಿಎಂ ಬಸವರಾಜ ಬೊಮ್ಮಾಯಿಯವರನ್ನ ಹೆದರಿಸಿರಬಹುದು. ಅದಕ್ಕೆ ಹೆದರಿ ಅಧಿಕಾರಿಗಳ ಮೂಲಕ ಕೇಸ್ ಮುಚ್ಚಿಸಿರಬಹುದು. ಅವರ ಕುಟುಂಬದ ದುಃಖ ಇನ್ನೂ ಮರೆಯಾಗಿಲ್ಲ. ಅಷ್ಟರೊಳಗೆ ಬಿ ರಿಪೋರ್ಟ್ ಹಾಕಿದ್ದಾರೆ. ಸರ್ಕಾರವೇ ತಮ್ಮ ಪಕ್ಷದ ನಾಯಕ ಆರೋಪಿ ಈಶ್ವರಪ್ಪರ ರಕ್ಷಣೆ ಮಾಡುವಲ್ಲಿ ಶಾಮೀಲಾಗಿದೆ. ಇದೇ ರೀತಿ ಅದರೆ ಮುಂದೆ ಕಾಂಟ್ರಾಕ್ಟ್ ಕೆಲಸ ಮಾಡಲು ಸಾಮಾನ್ಯ ಜನರು ಯಾರು ಮುಂದೆ ಬರುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.