ಪ್ರಧಾನಿ ಮೋದಿ ಉದ್ಘಾಟಿಸಿದ ನಾಲ್ಕೇ ದಿನಕ್ಕೆ ಕುಸಿದ ಎಕ್ಸ್ ಪ್ರೆಸ್ ವೇ
ನೋಯ್ಡ ಜು.21: ಉತ್ತರ ಪ್ರದೇಶದ ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇ ಯ ಭಾಗವೊಂದು ಉದ್ಘಾಟನೆಗೊಂಡ ನಾಲ್ಕನೇ ದಿನಕ್ಕೆ ಕುಸಿದಿದೆ.
ಎಕ್ಸ್ ಪ್ರೆಸ್ ವೇಯ 195 ಕಿಮೀ ದೂರದಲ್ಲಿರುವ ಚಿರಿಯಾ ಸೇಲಂಪುರ ಬಳಿ ಚಿತ್ರಕೂಟ ಲೇನ್ ಗೆ ಹೋಗುವ ರಸ್ತೆ ಕುಸಿದಿದೆ ಎಂದು ವರದಿಯಾಗಿದೆ. ಪೈಪ್ ಲೈನ್ ಒಡೆದು ಮಣ್ಣು ಕುಸಿದಿದೆ ಎಂದು ಹೇಳಲಾಗುತ್ತಿದ್ದು, ಇದರಿಂದಾಗಿ ಎರಡು ಅಡಿ ಅಗಲ ಮತ್ತು ಆರು ಅಡಿ ಉದ್ದದ ಹೊಂಡವೊಂದು ಸೃಷ್ಟಿಯಾಗಿದೆ.
ಬುಧವಾರ ರಾತ್ರಿ ರಸ್ತೆ ಕುಸಿತದಿಂದ ಎರಡು ಕಾರು ಹಾಗೂ ಒಂದು ಬೈಕ್ ಅಪಘಾತಕ್ಕೀಡಾಗಿದೆ. ದಾರಿ ಹೋಕರು ಸ್ಥಳವನ್ನು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಇದರಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಎಕ್ಸ್ ಪ್ರೆಸ್ ವೇಯಲ್ಲಿ ರಸ್ತೆ ಕುಸಿದಿರುವ ಬಗ್ಗೆ ಮಾಹಿತಿ ತಿಳಿದ ತಕ್ಷಣ ಆಡಳಿತ ಸಿಬ್ಬಂದಿ ಕಾರ್ಯಾಚರಣೆಗೆ ನಡೆಸಿದ್ದಾರೆ. ಸದ್ಯ ರಸ್ತೆ ದುರಸ್ತಿ ಮಾಡಲಾಗಿದೆ ಎಂದು ಯುಪಿಇಡಿಎ ಎಂಜಿನಿಯರ್ ತಿಳಿಸಿದ್ದಾಗಿ ವರದಿ ಉಲ್ಲೇಖಿಸಿದೆ.
ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಕನಸಿನ ಯೋಜನೆಯಾದ ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇ ಯನ್ನು ಜುಲೈ 16 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು.