ಸುಳ್ಯ: ಸೋಡಾ ಬಾಟಲಿಯಿಂದ ತಂಡದಿಂದ ಹಲ್ಲೆ- ಯುವಕ ಸಾವು
ಬೆಳ್ಳಾರೆ, ಜು.21: ಕಳಂಜದಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಮಸೂದ್ ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೂಲತಃ ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರು ನಿವಾಸಿಯಾಗಿದ್ದ ಮಸೂದ್ ಮೇಲೆ ಜೂ.19ರಂದು ರಾತ್ರಿ ಕಳಂಜ ಗ್ರಾಮದ ವಿಷ್ಣು ನಗರ ಎಂಬಲ್ಲಿ ಎಂಟು ಮಂದಿಯ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿತ್ತು. ಈ ವೇಳೆ ತಲೆಗೆ ಸೋಡಾ ಬಾಟಲಿಯ ಏಟು ಬಿದ್ದಿದ್ದರಿಂದ ಗಂಭೀರಾವಸ್ಥೆಗೆ ತಲುಪಿದ್ದ ಮಸೂದ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳದಿದ್ದಾರೆ.
ಹಲ್ಲೆಗೆ ಸಂಬಂಧಿಸಿ ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಪೆಲತ್ತಡ್ಕ ನಿವಾಸಿ ಇಬ್ರಾಹೀಂ ಶಾನಿಫ್ ಎಂಬವರು ನೀಡಿರುವ ದೂರಿನಂತೆ ಬೆಳ್ಳಾರೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಆರೋಪಿಗಳಾದ ಸುನೀಲ್, ಸುಧೀರ್, ಶಿವ, ಸದಾಶಿವ, ರಂಜಿತ್, ಅಭಿಲಾಷ್, ಜಿಮ್ ರಂಜಿತ್ ಹಾಗೂ ಭಾಸ್ಕರ ಎಂಬವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.