ವ್ಯಾಪಕ ಮಳೆಗೆ ಕೃಷಿ, ತೋಟಗಾರಿಕೆ ಬೆಳೆಗೆ ಹಾನಿ- ಭಾರತೀಯ ಕಿಸಾನ್ ಸಂಘ ಮನವಿ

ಉಡುಪಿ ಜು.21(ಉಡುಪಿ ಟೈಮ್ಸ್ ವರದಿ): ಅತೀ ಮಳೆಗೆ ನೆಲಕಚ್ಚಿದ ಭತ್ತದ ಬೇಸಾಯ ಹಾಗೂ ಕೊಳೆರೋಗಕ್ಕೆ ತುತ್ತಾದ ಅಡಿಕೆ, ಕಾಳು ಮೆಣಸು ಕೃಷಿಕರಿಗೆ ಪರಿಹಾರ ನೀಡುವಂತೆ ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.

ಈ ಬಗ್ಗೆ ಸಲ್ಲಿಸಲಾಗಿರುವ ಮನವಿಯಲ್ಲಿ ಸುಮಾರು ಒಂದು ತಿಂಗಳುಗಳ ಕಾಲ ವಿಪರೀತವಾಗಿ ಸುರಿದ ಮಳೆಯಿಂದ ಜಿಲ್ಲೆಯಾದ್ಯಂತ ಕೃಷಿ ಭೂಮಿಗಳೆಲ್ಲಾ ಮುಳುಗಿವೆ. ಅನೇಕ ರೈತರ ಮನೆ, ಕೊಟ್ಟಿಗೆಗಳು ಮಳೆಯಿಂದ ಕುಸಿದಿದೆ. ಗಾಳಿಗೆ ಅಡಿಕೆ, ಬಾಳೆ ಮೊದಲಾದ ಮರಗಳು ಬಿದ್ದಿವೆ. ಈ ಬಾರಿ ತಡವಾಗಿ ಪ್ರಾರಂಭವಾದ ಭತ್ತದ ಬೇಸಾಯ ವೇಗ ತೆಗೆದು ಕೊಳ್ಳುತ್ತಿರುವಾಗಲೇ ಅತೀ ಮಳೆ ಸುರಿದು, ನೆರೆ ಬಂದು, ನಾಟಿ ಮಾಡಿದ ಭತ್ತದ ಗಿಡಗಳೆಲ್ಲಾ ಕೊಚ್ಚಿ ಹೋಗಿವೆ. ಇನ್ನೂ ಕೆಲವು ಕಡೆ ಕಳೆದ ಹತ್ತು ದಿನಗಳಿಂದ ನೆರೆ ನಿಂತು ನಾಟಿ ಮಾಡಿದ ಭತ್ತದ ಸಸಿಗಳು ಕೊಳೆತು ಹೋಗಿವೆ. ನೆಟ್ಟಿಗೆ ತಯಾರಿಸಿಟ್ಟಿದ್ದ ನೇಜಿಗಳು ಕೂಡ ಉಪಯೋಗಕ್ಕೆ ಬಾರದೆ ಹಾಳಾಗಿವೆ. ಈಗಾಗಲೇ ಜುಲೈ ಕೊನೆಯಾಗಿದ್ದು, ಇನ್ನು ಹೊಸದಾಗಿ ಬೀಜ ಬಿತ್ತಿ, ನೆಟ್ಟಿ ಮಾಡುವುದು ಸಾಧ್ಯವಾಗದ ಮಾತು. ಇನ್ನೊಂದೆಡೆ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಸಮರ್ಪಕವಾಗಿ ಔಷದ ಸಿಂಪಡಣೆ ಮಾಡಲಾಗದ ಕಾರಣ ತೋಟಗಳಲ್ಲಿ ವಿಪರೀತ ಕೊಳೆ ರೋಗ ಪ್ರಾರಂಭವಾಗಿದೆ. ಮಳೆಗಾಲಕ್ಕೂ ಮುಂಚೆ ಸುರಿದ ಅಕಾಲಿಕ ಮಳೆಯಿಂದ ಈ ಬಾರಿ ಗೇರು ಬೆಳೆ ಕೂಡ ಹಾಳಾಗಿದ್ದು, ಬೆಳೆಗಾರರು ನಷ್ಟ ಅನುಭವಿಸಿದ್ದಾರೆ. ಭತ್ತದ ಕೃಷಿಗೆ ರೈತರು ಸಾಕಷ್ಟು ಹಣ ವ್ಯಯ ಮಾಡಿದ್ದು, ನಾಟಿ ಮಾಡಿದ ಗಿಡಗಳು ಕೊಳೆತು ಹೋಗಿವೆ. ಆ ಕಾರಣಕ್ಕೆ ಪ್ರತೀ ಎಕರೆಗೆ ಕನಿಷ್ಟ 20,000 ರೂಪಾಯಿ ಪರಿಹಾರ ನೀಡಬೇಕು. ಅದೇ ರೀತಿ ಕೊಳೆ ರೋಗದಿಂದ ನಷ್ಟ ಅನುಭವಿಸಿದ ಅಡಿಕೆ ಮತ್ತು ಕಾಳುಮೆಣಸು ಬೆಳೆಗಾರರಿಗೆ ಪ್ರಾಕೃತಿಕ ವಿಕೋಪದಡಿಯಲ್ಲಿ ಪರಿಹಾರ ನೀಡಬೇಕು ಎಂದು ಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಲಾಗಿದೆ.

ಇನ್ನು ಸಂಘದ ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ವೀಣಾ ಕೆ. ರವರು ಸರಕಾರದ ಮಾರ್ಗದರ್ಶನದಂತೆ ಖಂಡಿತ ಪರಿಹಾರ ನೀಡಲಾಗುವುದು. ರೈತರು ತಮಗಾದ ನಷ್ಟಗಳ ಬಗ್ಗೆ ತಹಶೀಲ್ದಾರರಿಗೆ, ತೋಟಗಾರಿಕೆ ಮತ್ತು ಕೃಷಿ ಇಲಾಖೆಗೆ ಮನವಿ ಸಲ್ಲಿಸಿದಲ್ಲಿ ಆದಷ್ಟು ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಂಘದ ನಿಯೋಗಕ್ಕೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ನವೀನ್ ಚಂದ್ರ ಜೈನ್ ರವರ ನೇತ್ರತ್ವದಲ್ಲಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಸತ್ಯನಾರಾಯಣ ಉಡುಪ, ವಾಸುದೇವ ಶ್ಯಾನುಭಾಗ್, ಉಮಾನಾಥ ರಾನಡೆ, ಗೋವಿಂದರಾಜ್ ಭಟ್, ಚಂದ್ರಹಾಸ ಶೆಟ್ಟಿ, ಹರೀಶ್ ಕುಮಾರ್, ಕೆ.ಪಿ. ಭಂಡಾರಿ, ದೀಪಕ್ ಪೈ, ಎಸ್.ಎನ್. ಭಟ್ ಮೊದಲಾದವರು ಇದ್ದರು. 

Leave a Reply

Your email address will not be published. Required fields are marked *

error: Content is protected !!