ಕಾಪು: ಮದುವೆ ಕಾರ್ಯಕ್ರಮಕ್ಕೆ ಕಾರು ಪಡೆದು ವಾಪಸ್ಸು ನೀಡದೆ ವಂಚನೆ
ಕಾಪು ಜು.21 (ಉಡುಪಿ ಟೈಮ್ಸ್ ವರದಿ): ಮದುವೆ ಕಾರ್ಯಕ್ರಮಕ್ಕೆ ಹೋಗಲೆಂದು ಕಾರು ಪಡೆದು ವಾಪಸ್ಸು ನೀಡದೆ ವಂಚಿಸಿರುವುದಾಗಿ ಕಾಪುವಿನ ಮೂಡಬೆಟ್ಟು ಗ್ರಾಮದ ಪ್ರಾನ್ಸಿಸ್ ಕಿರಣ ಲಸ್ರಾದೊ ಎಂಬವರು ತಮ್ಮ ಸ್ನೇಹಿತ ಅಮಿರ್ ಸಾಹೇಬ್ ಎಂಬಾತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಾನ್ಸಿಸ್ ಕಿರಣ ಲಸ್ರಾದೊ ಅವರು ತಮ್ಮ ಕಾರನ್ನು ತಮ್ಮ ಸ್ನೇಹಿತ ಅಮೀರ ಸಾಹೇಬ್ ಎಂಬಾತನಿಗೆ ಆಗಾಗ ನೀಡುತ್ತಿದ್ದರು. ಅದರಂತೆ ಆರೋಪಿಯು ಮದುವೆ ಕಾರ್ಯಕ್ಕೆ ಹಾಜರಾಗಲು ಕಾರನ್ನು ಒಂದು ತಿಂಗಳ ಕಾಲ ಬಳಕೆಗಾಗಿ ಪಡೆದುಕೊಂಡಿದ್ದ. ಒಂದು ತಿಂಗಳ ನಂತರ ಕಾರಿನ ಬಗ್ಗೆ ವಿಚಾರಿಸಿದಾಗ, ಆರೋಪಿಯು ಸ್ವಲ್ಪ ಹಣವನ್ನು ನೀಡಿ, ಮುಂಬೈಗೆ ಹೋಗಲು ಕಾರಿನ ಅಗತ್ಯವಿರುವುದಾಗಿ ತಿಳಿಸಿದ್ದಾನೆ. ಅದರಂತೆ ಆರೋಪಿಗೆ ಕಾರು ಬಿಟ್ಟುಕೊಟ್ಟಿದ್ದು, ಆರೋಪಿಯು ಮುಂಬೈನಿಂದ ಬಂದ ನಂತರ ಪ್ರಾನ್ಸಿಸ್ ಕಿರಣ ಲಸ್ರಾದೊ ಅವರನ್ನು ಸಂಪರ್ಕಿಸದೇ ಕಾರು ಸಹ ಹಿಂತಿರುಗಿಸಿರುವುದಿಲ್ಲ. ಈ ಬಗ್ಗೆ ವಿಚಾರಿಸಿದಾಗ ಒಂದಲ್ಲ ಒಂದು ಕಾರಣ ನೀಡಿತ್ತಿದ್ದು, ಕಾರನ್ನು ನೀಡದೆ, ಬಳಸಿದ ಹಣವನ್ನು ನೀಡದೇ ವಂಚಿಸಿದ್ದಾನೆ. ಮಾತ್ರವಲ್ಲದೆ ಈ ಬಗ್ಗೆ ವಿಚಾರಿಸಿದಾಗ ಆತ ಗೆಳೆಯ ಡೇವಿಡ್ ಎಂಬಾತನಿಗೆ ನೀಡಿದ್ದಾಗಿ ತಿಳಿಸಿದ್ದು, ಈ ಬಗ್ಗೆ ವಿಚಾರಿಸಿದ್ದಲ್ಲಿ ಅವರಿಂದ ಯಾವುದೇ ಪ್ರತಿಕ್ರಿಯೆ ನೀಡಿರುವುದಿಲ್ಲ.
ಬಳಿಕ ಮಾ.25 ರಂದು ಆರೋಪಿಯ ಮನೆಗೆ ಹೋಗಿ ವಿಚಾರಿಸಿದ್ದಲ್ಲಿ ಸಿದ್ದಿಕ್ ಮತ್ತು ಆರೋಪಿಯ ಬಳಿ ಹಣಕಾಸಿನ ವ್ಯವಹಾರವಿದ್ದು, ಹಣ ಪಾವತಿ ಮಾಡದ ಕಾರಣ ಆರೋಪಿಯಿಂದ ಸಿದ್ದಿಕ್ ಕಾರನ್ನು ತೆಗೆದುಕೊಂಡು ಹೋಗಿದ್ದು, ಆತನ ಹಣ ಪಾವತಿ ಮಾಡಿದ ನಂತರ ಕಾರು ನೀಡುವುದಾಗಿ ತಿಳಿಸಿದ್ದಾನೆ. ಅದರಂತೆ ಕಾರನ್ನು ಯಾವುದೇ ಕಾನೂನು ಬಾಹಿರ ಕೃತ್ಯಗಳಿಗೆ ಬಳಸಿದ್ದರೆ ಆರೋಪಿ ಹೊಣೆಗಾರನಾಗಿದ್ದು, ಆರೋಪಿಯು ಕಾರನ್ನು ಕಾನೂನು ಬಾಹಿರ ಕೃತ್ಯಗಳಿಗೆ ಬಳಸಿಕೊಂಡು ವಂಚಿಸುವ ಉದ್ದೇಶವಿರುತ್ತದೆ. ಆದ್ದರಿಂದ ಮೋಸ ಮಾಡಿ ಅಕ್ರಮವಾಗಿ ಕಾರನ್ನು ವಶದಲ್ಲಿಟ್ಟುಕೊಂಡಿರುವುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.