ಬೈಂದೂರು: ಗದ್ದೆ ಕೆಲಸಕ್ಕೆ ಹೋಗುತ್ತಿದ್ದ ಯುವಕ ಕೆರೆಗೆ ಬಿದ್ದು ಮೃತ್ಯು

ಬೈಂದೂರು, ಜು.21: ಗದ್ದೆ ಕೆಲಸಕ್ಕೆಂದು ತೋಟದತ್ತ ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಯುವಕನೋರ್ವ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಕೂರ್ಸಿ ಎಂಬಲ್ಲಿ ನಡೆದಿದೆ.

ಕೂರ್ಸಿ ನಿವಾಸಿ ಕಾರ್ತಿಕ್ ಆಚಾರ್ (26) ಮೃತ ಯುವಕ. ನಿನ್ನೆ ಮಧ್ಯಾಹ್ನ ಊಟ ಮುಗಿಸಿ ಗದ್ದೆಯ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರಟಿದ್ದರು. ಬಳಿಕ ಕಾರ್ತಿಕ್ ವಾಪಸ್ ಮನೆಗೆ ಬಾರದೇ ಇದ್ದುದರಿಂದ ಸಂಜೆಯ ವೇಳೆ ಸಹೋದರರು ಗದ್ದೆ, ತೋಟದ ಬಳಿ ಹುಡುಕಾಡಿದ್ದು, ಈ ವೇಳೆ ಗದ್ದೆಯ ಬಳಿಯಿರುವ ಕೆರೆಯಲ್ಲಿ ಕಾರ್ತಿಕ್ ಅವರ ಚಪ್ಪಲಿ ತೇಲುತ್ತಿರುವುದು ಕಂಡು ಬಂದಿದೆ. ಇದರಿಂದ ಅನುಮಾನಗೊಂಡು ಮನೆಯವರು ಅಗ್ನಿಶಾಮಕ ದಳದವರಿಗೆ ತಿಳಿಸಿದ್ದು, ಅಗ್ನಿಶಾಮಕ ದಳದವರು ಆಗಮಿಸಿ ಕೆರೆಯಲ್ಲಿ ಶೋಧ ನಡೆಸಿದಾಗ ಕಾರ್ತಿಕ್ ಅವರ ಮೃತದೇಹ ಪತ್ತೆಯಾಗಿದೆ.

ಕೃಷಿ ಚಟುವಟಿಕೆಗಾಗಿ ಗದ್ದೆ ಕೆಲಸಕ್ಕೆ ಹೋದ ಕಾರ್ತಿಕ್ ಕೆರೆಯ ಬದಿಯಲ್ಲಿರುವ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲುಜಾರಿ, ಕೆರೆಗೆ ಬಿದ್ದಿರಬಹುದೆಂದು ಕುಟುಂಸ್ಥರು ತಿಳಿಸಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!