ಅತಿ ಬುದ್ಧಿವಂತರ ಜೊತೆ ಕೆಲಸ ಮಾಡೋದು ಕಷ್ಟ, ವಿಶ್ವಾಸ ಇಲ್ಲಾಂದ್ರೆ ತಗೊಂಡು ಹೋಗು- ಸಿಎಂ ಸಿಡಿಮಿಡಿ!
ಬೆಂಗಳೂರು: ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ದಸರಾ ಮಹೋತ್ಸವಕ್ಕೆ ಸಂಬಂಧಪಟ್ಟಂತೆ ಉನ್ನತ ಮಟ್ಟದ ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ ತಮ್ಮ ಕ್ಷೇತ್ರಕ್ಕೆ ಸಂಬಂಧ ಪಟ್ಟ ದಾಖಲೆಯೊಂದನ್ನು ಸಿಎಂಗೆ ನೀಡಿದ್ದಾರೆ. ಅದನ್ನು ಓದುವಾಗಲೇ ನಿಮ್ಮ ಜೊತೆಗೆ ಫೋಟೋ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. ಇದಕ್ಕೆ ಕೋಪಗೊಂಡ ಬೊಮ್ಮಾಯಿ ವಿಶ್ವಾಸ ಇಲ್ಲಾಂದ್ರೆ ಇದನ್ನು ವಾಪಸ್ ತಗೊಂಡು ಹೋಗು ಎಂದು ಗುಡುಗಿದ್ದಾರೆ.
ಬೊಮ್ಮಾಯಿ ಅವರ ಕೋಪ ಕಂಡ ಪ್ರತಾಪ್ ಸಿಂಹ, ನಿಮ್ಮ ಜೊತೆ ಒಂದು ಫೋಟೋ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ, ಇದರಿಂದ ಮತ್ತಷ್ಟು ಅಸಮಾಧಾನಗೊಂಡ ಸಿಎಂ ಬೊಮ್ಮಾಯಿ, ‘ನನ್ ಜೊತೆ ಫೋಟೊ ಬೇಡ, ಅತಿ ಬುದ್ಧಿವಂತರ ಜೊತೆ ಕೆಲಸ ಮಾಡೋದೆ ಕಷ್ಟ ಎಂದು ಗುಡುಗಿದ್ದಾರೆ.
ಮುಖ್ಯಮಂತ್ರಿಯವರ ಸುದ್ದಿಗೋಷ್ಠಿ ಮುಗಿಯುತ್ತಿದ್ದಂತೆ ಸಿಎಂ ಅವರ ಹಿಂದಿನಿಂದ ಹೋದ ಪ್ರತಾಪ್ ಸಿಂಹ ಮತ್ತೆ ಪೇಪರ್ ಹಿಡಿದು ಕೇಳಿಕೊಂಡಿದ್ದರೂ ಬೊಮ್ಮಾಯಿ ಅವರು ಮಾತನಾಡಿಸದೇ ಹೊರಟು ಹೋಗಿದ್ದಾರೆ.
ಈ ಘಟನೆ ನಂತರ ಕಬಿನಿಗೆ ಬಾಗಿನ ಅರ್ಪಿಸಲು ಬಸವರಾಜ ಬೊಮ್ಮಾಯಿ ಮೈಸೂರಿಗೆ ಆಗಮಿಸಿದ್ದರು. ಚಾಮುಂಡಿ ಬೆಟ್ಟ, ಕಬಿನಿ ಹಾಗೂ ಕೆಆರ್‌ಎಸ್ ಮೂರು ಕಡೆ ಸಿಎಂ ಕಾರ್ಯಕ್ರಮಗಳಲ್ಲಿ ಪ್ರತಾಪಸಿಂಹ ಭಾಗವಹಿಸಿದಿರುವುದು ಭಿನ್ನಾಭಿಪ್ರಾಯ ಮೂಡಿರುವ ಅನುಮಾನ ಮೂಡಿಸಿದೆ. ಸಂಸದ ಪ್ರತಾಪ್ ಸಿಂಹ ಖುದ್ದು ಹಾಜರಾಗಿ ಸಿಎಂ ಅವರನ್ನು ಸ್ವಾಗತಿಸಬೇಕಾಗಿತ್ತು, ಆದರೆ ಬಾಗಿನ ಅರ್ಪಣೆ ಸೇರಿದಂತೆ ಯಾವ ಕಾರ್ಯಕ್ರಮದಲ್ಲೂ ಪ್ರತಾಪ್ ಸಿಂಹ ಭಾಗವಹಿಸಿರಲಿಲ್ಲ.