ಉಡುಪಿ: ಬೀದಿ ಬದಿ, ಸಣ್ಣ ವ್ಯಾಪಾರಿ, ಆಟೋ ಚಾಲಕರಿಗೆ ಸಾಲ ಸೌಲಭ್ಯ
ಉಡುಪಿ ಜು.21(ಉಡುಪಿ ಟೈಮ್ಸ್ ವರದಿ): ಕೋವಿಡ್ -19 ಅವಧಿಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಬೀದಿ ಬದಿ ವ್ಯಾಪಾರಸ್ಥರ ಆರ್ಥಿಕ ಸಬಲೀಕರಣಕ್ಕಾಗಿ ಭಾರತ ಸರಕಾರ ” ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ” ಕಿರು ಸಾಲ ಸೌಲಭ್ಯ ಯೋಜನೆಯನ್ನು ಅನುಷ್ಠಾನ ಗೊಳಿಸುತ್ತಿದೆ.
ಈ ಬಗ್ಗೆ ಉಡುಪಿ ನಗರ ಸಭೆ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು, ಬೀದಿ ಬದಿ ವ್ಯಾಪಾರಿಗಳ ಅಭಿವೃದ್ಧಿ ಮತ್ತು ವ್ಯಾಪಾರ ಪುನರ್ ಸ್ಥಾಪಿಸುವ ಸಲುವಾಗಿ ಸರಕಾರ ಈ ಯೋಜನೆ ಅನುಷ್ಠಾನ ಗೊಳಿಸುತ್ತಿದ್ದು, ಇದರ ಪ್ರಯೋಜನವನ್ನು ಅರ್ಹರು ಪಡೆಯುವಂತೆ ಸೂಚಿಸಿದೆ.
ಉಡುಪಿ ನಗರಸಭಾ ಪ್ರದೇಶದಲ್ಲಿ ಬೀದಿ ವ್ಯಾಪಾರಿಗಳಾಗಿ ತೊಡಗಿಸಿಕೊಂಡು ಗುರುತಿಸಲ್ಪಟ್ಟ ಎಲ್ಲಾ ಅರ್ಹ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಈ ಯೋಜನೆಯಡಿ ಪ್ರತಿ ಬೀದಿಬದಿ ವ್ಯಾಪಾರಿಯು ಪ್ರಥಮ ಹಂತದಲ್ಲಿ ರೂ.10,000, 2ನೇ ಹಂತದಲ್ಲಿ ರೂ. 20,000 ಮತ್ತು 3ನೇ ಹಂತದಲ್ಲಿ ರೂ.50,000 ದ ವರೆಗಿನ ಸಾಲ ಸೌಲಭ್ಯಗಳನ್ನು ಮೇಲಾಧರ ಮುಕ್ತ ಬಂಡವಾಳ ಸಾಲ ಶೇ. 7ರ ಬಡ್ಡಿಯಲ್ಲಿ ಪಡೆಯಲು ಅರ್ಹರಾಗಿರುತ್ತಾರೆ. ಒಂದು ವರ್ಷದ ಅವಧಿಯವರೆಗೆ ಪ್ರತೀ ಕಂತನ್ನು ಪ್ರತೀ ತಿಂಗಳು ಮರು ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ವಾಣಿಜ್ಯ ಬ್ಯಾಂಕ್ ಗಳು ಈ ಯೋಜನೆಯಡಿ ಸಾಲ ನೀಡುವ ಸಂಸ್ಥೆಗಳಾಗಿದೆ. ಅಲ್ಲದೇ ಬೀದಿ ಬದಿ ವ್ಯಾಪಾರಿಗಳಿಗೆ ಡಿಜಿಟಲ್ ವಹಿವಾಟು ಕೈಗೊಳ್ಳಲು ಮಾಸಿಕ ಕ್ಯಾಶ್ ಬ್ಯಾಕ್ ಪಡೆಯಲು ಈ ಯೋಜನೆ ಉತ್ತೇಜಿಸುತ್ತದೆ.
ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರ ಮಾಡುತ್ತಿರುವ ಮತ್ತು ಸಣ್ಣಮಟ್ಟ ಎಲ್ಲಾ ವ್ಯಾಪಾರಿಗಳು ಹಾಗೂ ಆಟೋ ಚಾಲಕರುಗಳು ಈ ಯೋಜನೆಯ ಸಂಪೂರ್ಣ ಪ್ರಯೋಜನ ಪಡೆಯಲು ಸೂಚಿಸಲಾಗಿದೆ. ಇದಕ್ಕಾಗಿ ಅರ್ಹರು ಸಮುದಾಯ ಸಂಘಟನಾಧಿಕಾರಿ, ಉಡುಪಿ ನಗರಸಭೆ ಇವರನ್ನು ಕಛೇರಿಯ ಅವಧಿಯಲ್ಲಿ ಸಂಪರ್ಕಿಸಿ, ಆಧಾರ್ ಕಾರ್ಡ್, ಮತದಾನದ ಗುರುತಿನ ಚೀಟಿ/ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಮತ್ತು 2 ಪಾಸ್ ಪೋರ್ಟ್ ಅಳತೆಯ ಫೋಟೋಗಳ ಪ್ರತಿಯೊಂದಿಗೆ ಒಂದು ವಾರದ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅಥವಾ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9448723833/ 9901481729 ಯನ್ನು ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ.