ಮಾನವ ಹಕ್ಕುಗಳ ಹೋರಾಟಗಾರ, ಚಿಂತಕ ಜಿ.ರಾಜಶೇಖರ್ ಇನ್ನಿಲ್ಲ
ಉಡುಪಿ ಜು.20 (ಉಡುಪಿ ಟೈಮ್ಸ್ ವರದಿ): ಮಾನವ ಹಕ್ಕುಗಳ ಹೋರಾಟಗಾರ ಜಿ.ರಾಜಶೇಖರ್ ಹಿರಿಯ ಚಿಂತಕ (75) ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಅವರ ಆರೋಗ್ಯ ತೀವ್ರ ಹದಗೆಟ್ಟು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ , ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ
ಇವರು ಬರಹಗಾರರಾಗಿ, ಸಾಹಿತಿಯಾಗಿ, ವಿಮರ್ಶಕರಾಗಿ, ಚಿಂತಕರಾಗಿ ಗುರುತಿಸಿಕೊಂಡಿದ್ದು, ವಾರ ಪತ್ರಿಕೆ ಹಾಗೂ ದಿನ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಿದ್ದರು. ಇವರ ಬಹುವಚನ ಭಾರತ ಎಂಬ ಕೃತಿಗೆ ಬಂದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಿರಸ್ಕರಿಸಿ ಸುದ್ದಿಯಾಗಿದ್ದರು. 1946 ಏಪ್ರಿಲ್ 4 ರಂದು ವಿಷ್ಣುಮೂರ್ತಿ ಅಯ್ಯ ಹಾಗೂ ಸಾವಿತ್ರಿಯಮ್ಮನವರ ಎರಡನೇ ಮಗನಾಗಿ, ಬೈಕಾಡಿಯಲ್ಲಿ ಜನಿಸಿದ ರಾಜಶೇಖರ್
ಅವರು ಬೈಕಾಡಿ, ಮಣಿಪಾಲಗಳಲ್ಲಿ ತಮ್ಮ ಶಾಲಾ ಶಿಕ್ಷಣ ಹಾಗೂ ಉಡುಪಿಯ ಎಂ.ಜಿ.ಎಮ್. ಕಾಲೇಜಿನಲ್ಲಿ ಪದವಿ ಶಿಕ್ಷಣಗಳನ್ನು ಪೂರೈಸಿದರು. ಆ ನಂತರದಲ್ಲಿ ಬರವಣಿಗೆಯ ಸೃಜನಶೀಲತೆ ಹಾಗೂ ಚಳುವಳಿಯ ಸಾಂಗತ್ಯಗಳನ್ನು ಬೆಳೆಸಿಕೊಂಡಿದ್ದರು.
ರಾಜಶೇಖರ್ ಅವರು, ಜೀವ ವಿಮಾ ನೌಕರರ ಸಂಘದ ಸದಸ್ಯರಾಗಿ, ರೈತ ಕಾರ್ಮಿಕ ಚಳುವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ದುಡಿವ ಜನರ ಪರವಾಗಿ ನಿಲ್ಲುತ್ತಿದ್ದರು. ಎಷ್ಟೇ ಭಿನ್ನಮತವಿದ್ದರೂ, ಬಡ ಜನರ ಹೋರಾಟಗಳಿಗೆ ರಾಜಿ ಇಲ್ಲದೆ ಹೆಗಲು ಕೊಡುವ ಅವರ ಬದ್ಧತೆ ಜೀವನದುದ್ದಕ್ಕೂ ಅಳವಡಿಸಿಕೊಂಡಿದ್ದರು. 1970ರ ದಶಕದಿಂದಲೂ ಉಡುಪಿಯಲ್ಲಿ ನಡೆಯುವ ಬೀದಿಹೋರಾಟಗಳಲ್ಲಿ ರಾಜಶೇಖರ್ ಅವರು ಭಾಗವಹಿಸುತ್ತಿದ್ದರು.
1990ರ ದಶಕದಲ್ಲಿ ಕರಾವಳಿ ಕರ್ನಾಟಕದಲ್ಲಿ ಕೋಮುಹಿಂಸೆಯ ರಾಜಕೀಯವು ತೀವ್ರವಾಗಿ ತಲೆ ಎತ್ತುವುದನ್ನು ಕಂಡು ಜಾಗೃತರಾದ ರಾಜಶೇಖರ್, ಉಡುಪಿ ಜಿಲ್ಲೆಯ ಕಾರ್ಮಿಕರು, ದಲಿತರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರನ್ನು ಒಗ್ಗೂಡಿಸಿ, ಕೋಮುವಾದದ ರಾಜಕೀಯವನ್ನು ಎದುರಿಸುವ ಸೌಹಾರ್ದ ವೇದಿಕೆಯನ್ನು ಕಟ್ಟುವಲ್ಲಿ ಮುಂಚೂಣಿ ಪಾತ್ರ ವಹಿಸಿದರು. ಸಾಹಿತ್ಯಿಕ, ವೈಚಾರಿಕ ಹಾಗೂ ಸಾಮಾಜಿಕ ಮಹತ್ವದ ಎಂಟು ಕೃತಿಗಳನ್ನೂ, ನೂರಾರು ಲೇಖನಗಳನ್ನೂ ಬರೆದಿರುವ ಜಿ.ರಾಜಶೇಖರ್ ಅವರು, 20ನೇ ಶತಮಾನದ ಪ್ರಮುಖ ಸಾಹಿತ್ಯ ವಿಮರ್ಶಕರಲ್ಲಿ ಓರ್ವರೆಂದು ಗುರುತಿಸಲ್ಪಟ್ಟಿದ್ದಾರೆ. ಹೀಗಾಗಿ ಅನೇಕ ಪ್ರಶಸ್ತಿಗಳು ಅವರನ್ನು ಹುಡುಕಿ ಬಂದಿದ್ದವು. ಆದರೆ ನೊಂದವರ ಪರ ಪ್ರಾಮಾಣಿಕ ಸಂವೇದನೆಯುಳ್ಳವರಾಗಿ, ಆ ಪ್ರಶಸ್ತಿಗಳನ್ನು ನಿರ್ದಾಕ್ಷಿಣ್ಯವಾಗಿ ನಿರಾಕರಿಸಿದ್ದರು. ಹಾಗೆಯೇ ನೊಂದ ಜನ ಅಭಿಮಾನದಿಂದ ಪ್ರಶಸ್ತಿ, ಗೌರವಗಳನ್ನು ನೀಡಲು ಮುಂದಾದರೆ, ಅದು ನೊಂದವರಿಗೆ ಋಣ ಸಂದಾಯವೆನ್ನುತ್ತಾ ವಿನಯದಲ್ಲಿ ತಲೆಬಾಗುತ್ತಿದ್ದರು.
ನಾಳೆ (ಜುಲೈ21)ಅಂತ್ಯಕ್ರಿಯೆ: ಮೃತ ಶರೀರವನ್ನು ಉಡುಪಿ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು ಬೆಳಿಗ್ಗೆ 8ಗಂಟೆಗೆ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣ ಸಮೀಪದಲ್ಲಿರುವ ಸಂಬಂಧಿಕರ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ಬಳಿಕ ಹತ್ತು ಗಂಟೆಗೆ ಅಂತ್ಯಕ್ರಿಯೆ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.