ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ- ಮಾಜಿ ಸಚಿವ ಈಶ್ವರಪ್ಪಗೆ ಕ್ಲೀನ್ ಚಿಟ್
ಉಡುಪಿ ಜು.20: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಅಂತಿಮ ವರದಿಯನ್ನು ಪೊಲೀಸರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಉಡುಪಿ ಪೊಲೀಸರು ಪೂರ್ಣಗೊಳಿಸಿದ್ದು, ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಂತಿಮ ವರದಿಯಲ್ಲಿ ಸಿಸಿಟಿವಿ ವೀಡಿಯೋ, ಆಡಿಯೋ, ಮೊಬೈಲ್ ಸಂದೇಶ, ಬ್ಯಾಂಕ್ ದಾಖಲೆ, ಗುತ್ತಿಗೆ ವಿವರ, ಕುಟುಂಬಸ್ಥರು, ಸ್ನೇಹಿತರ ಹೇಳಿಕೆಗಳನ್ನು ಉಲ್ಲೇಖ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಾಜಿ ಸಚಿವ ಈಶ್ವರಪ್ಪ ಹಾಗೂ ಅವರ ಕಡೆಯವರಿಂದ ಬೆದರಿಕೆ ಬಂದಿದೆ ಎಂಬುದಕ್ಕೆ ದಾಖಲೆಗಳ ಕೊರತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಪ್ರಕರಣ ಕೊಲೆ ಅಥವಾ ಕೊಲೆ ಪ್ರಚೋದನೆ ಎಂಬುದಕ್ಕೆ ಸೂಕ್ತ ಸಾಕ್ಷಿಗಳು ಇಲ್ಲ. ಎಲ್ಲಾ ತಾಂತ್ರಿಕ ಸಾಕ್ಷಿಗಳನ್ನು ಸಂಗ್ರಹಿಸಿ ಕೋರ್ಟ್ ಗೆ ಸಲ್ಲಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.