ಪರ್ಕಳ: ದಿನ ನಿತ್ಯ ಟ್ರಾಫಿಕ್ ಜಾಮ್- ವಾಹನ ಸವಾರರು ಹೈರಾಣು

ಮಣಿಪಾಲ ಜು.20: ಮಲ್ಪೆ- ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪೂರ್ಣಗೊಳ್ಳದ ಕಾರಣ ಮಳೆಯಿಂದಾಗಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈ ಭಾಗದಲ್ಲಿ ದಿನಾಲೂ ವಾಹನ ಸವಾರರು ಟ್ರಾಫಿಕ್ ಜಾಮ್ ಸಮಸ್ಯೆ ಎದುರಿಸುವಂತಾಗಿದೆ.

ಹೆಬ್ರಿ, ಪೆರ್ಡೂರು, ಆತ್ರಾಡಿ, ಹಿರಿಯಡ್ಕ, ಪರ್ಕಳ ಹಾಗೂ ಕಾರ್ಕಳ ಭಾಗ ದಿಂದ ಅತೀ ಹೆಚ್ಚು ಮಂದಿ ದ್ವಿಚಕ್ರ ವಾಹನದಲ್ಲಿ ಮಣಿಪಾಲ ಉದ್ಯೋಗಕ್ಕಾಗಿ ಬರುತ್ತಿದ್ದಾರೆ. ಆದರೆ ಬೆಳಗ್ಗಿನ ಅವಧಿಯಲ್ಲಿ ಕೆಳಪರ್ಕಳದಲ್ಲಿನ ಅವ್ಯವಸ್ಥೆಯಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇದರಿಂದ ಸವಾರರು ತೀರ ತೊಂದರೆ ಅನುಭವಿಸುವಂತಾಗಿದೆ.

ಇಲ್ಲಿ ಗಂಟೆಗಟ್ಟಲೆ ಉಂಟಾಗುತ್ತಿರುವ ಟ್ರಾಫಿಕ್ ಜಾಮ್‍ನಿಂದಾಗಿ ಈ ಮಾರ್ಗವಾಗಿ ಮಣಿಪಾಲ ಹಾಗೂ ಉಡುಪಿ ನಡುವಿನ ಆಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಹೋಗುವ ಅಂಬ್ಯುಲೆನ್ಸ್‍ಗಳು ಸಿಲುಕಿಕೊಂಡು ರೋಗಿಗಳು ಕಷ್ಟ ಪಡುವಂತಾಗಿದೆ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಈಗಾಗಲೇ ಜಿಲ್ಲಾಧಿಕಾರಿ 10 ದಿನದೊಳಗಾಗಿ ರಸ್ತೆಗಳೆಲ್ಲವೂ ಸುಸ್ಥಿತಿಯಲ್ಲಿರಬೇಕೆಂಬ ಸೂಚನೆಯನ್ನು ಹೆದ್ದಾರಿ ಅಧಿಕಾರಿಗಳಿಗೆ ಗಡುವು ನೀಡಿದ್ದರು. ಆದರೆ ಆ ಗಡುವು ಮುಗಿದರೂ ಯಾವುದೇ ದುರಸ್ತಿ ಕಾರ್ಯ ನಡೆದಿಲ್ಲ. ಈಗ ರಸ್ತೆಯಲ್ಲಿ ಹೊಸ ಹೊಸ ಹೊಂಡಗಳು ರೂಪುಗೊಳ್ಳುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!