ಭ್ರಷ್ಟಾಚಾರಕ್ಕೆ ಆಸ್ಪದ ಕೊಡೆದೆ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೆ-ಮಾಜಿ ಅಧ್ಯಕ್ಷ ಕೃಷ್ಣರಾಜ್ ಕೋಟ್ಯಾನ್

ಉಡುಪಿ ಜು.20 (ಉಡುಪಿ ಟೈಮ್ಸ್ ವರದಿ): ಒಂದು ಕಾಲು ವರ್ಷ ಉಪ್ಪೂರು ಗ್ರಾಮ ಪಂಚಾಯತ್ ನ ಅಧ್ಯಕ್ಷನಾಗಿ ಉಡುಪಿ ಶಾಸಕ ಕೆ. ರಘುಪತಿ ಭಟ್ ಮಾರ್ಗದರ್ಶನದಲ್ಲಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದೇನೆ. ಪಕ್ಷವು ಈ ಹಿಂದೆ ಸೂಚಿಸಿದಂತೆ ಒಂದು ಕಾಲು ವರ್ಷ ಗ್ರಾಮ ಪಂಚಾಯತ್ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ ಸಂತೃಪ್ತಿ ನನಗಿದೆ. ನನ್ನ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ಮತ್ತು ಅವ್ಯವಹಾರಕ್ಕೆ ಆಸ್ಪದ ಕೊಡೆದೆ ಪಂಚಾಯತ್ ಸದಸ್ಯರ ಸಹಕಾರದೊಂದಿಗೆ ಗ್ರಾಮದ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಮಾಜಿ ಅಧ್ಯಕ್ಷ ಕೃಷ್ಣರಾಜ್ ಕೋಟ್ಯಾನ್ ಸ್ಪಷ್ಟಪಡಿಸಿದ್ದಾರೆ.

ಉಪ್ಪೂರು ಗ್ರಾಮ ಪಂಚಾಯತ್ ನಲ್ಲಿ ಪೂರ್ವ ನಿರ್ಣಯದಂತೆ ಮೊದಲ ಅವಧಿಗೆ ಕೃಷ್ಣ ರಾಜ ಕೋಟ್ಯಾನ್ ಅವರನ್ನು ಪಕ್ಷ ಗ್ರಾಮ ಪಂಚಾಯತ್ ಅಧ್ಯಕ್ಷ ಹುದ್ದೆ ಏರಲು ಸೂಚಿಸಿತ್ತು. ಎರಡನೇ ಅವಧಿಗೆ ಗ್ರಾಮ ಪಂಚಾಯತ್ ಸದಸ್ಯ ಪದ್ಮನಾಭ ಶೇರಿಗಾರ್ ಅವರನ್ನು ಅಧ್ಯಕ್ಷರಾಗುವಂತೆ ಈ ಹಿಂದೆಯೇ ಬಿಜೆಪಿಯಿಂದ ನಿರ್ಣಯಿಸಲಾಗಿತ್ತು. ಒಂದು ಕಾಲು ವರ್ಷ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಅವಧಿ ಪೂರೈಸಿದ ಕೃಷ್ಣರಾಜ ಕೋಟ್ಯಾನ್ ಅವರ ಸ್ಥಾನಕ್ಕೆ ಈಗಾಗಲೇ ವಿದೇಶಕ್ಕೆ ತೆರಳಿರುವ ಹಾಗೂ ಪಂಚಾಯತ್ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಪದ್ಮನಾಭ ಶೇರಿಗಾರ್ ಅವರ ಸ್ಥಾನಕ್ಕೆ ಜಿಲ್ಲಾ ಬಿಜೆಪಿ ಆಯ್ಕೆ ಮಾಡುವಂತೆ ಸೂಚಿಸಿತ್ತು.  

ಆದರೆ ಬಳಿಕ ನಡೆದ ರಾಜಕೀಯ ವಿದ್ಯಾಮಾನದಲ್ಲಿ ಪಂಚಾಯತ್ ಸದಸ್ಯನಾಗಿ ಮೊದಲ ಬಾರಿ ಆಯ್ಕೆಯಾದ ಧರಣೇಶ್ ಅವರು ತಾನೂ ಪಂಚಾಯತ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ತಿಳಿಸಿದ್ದರು. ಇದರಿಂದ ಪಕ್ಷವು ಸೂಚಿಸಿದ  ಅಭ್ಯರ್ಥಿ ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ಕೋಟ್ಯಾನ್ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಈ ಬಗ್ಗೆ ಪಕ್ಷವು ಪಂಚಾಯತ್ ಸದಸ್ಯರ ಸಭೆ ಕರೆದು. ಆಂತರಿಕ ಚುನಾವಣೆ ನಡೆಸಿ ಇದರಲ್ಲಿ ಇಬ್ಬರಿಗೂ ಸಮಬಲದ ಮತ ಸಿಕ್ಕಿತ್ತು. ಬಳಿಕ ಅದೃಷ್ಟ ಚೀಟಿಯಲ್ಲಿ ಮಹೇಶ್ ಕೋಟ್ಯಾನ್ ಗೆಲುವು ಸಾಧಿಸಿದ್ದು, ಅವರೇ ಗ್ರಾಮ ಪಂಚಾಯತ್ ಅಧ್ಯಕ್ಷ ಎಂದು ಪಕ್ಷವು ಸೂಚಿಸಿತ್ತು.

ನಂತರ ಕೆಲವೊಂದು ಸದಸ್ಯರು ಧರಣೇಶ್ ಅವರ ಜೊತೆಗೂಡಿ ಗ್ರಾಮ ಪಂಚಾಯತ್ ಚುನಾವಣೆ ಸಂದರ್ಭ ನಾಮ ಪತ್ರ ಸಲ್ಲಿಸಲು ಪ್ರೋತ್ಸಾಹಿಸಿದ ಕಾರಣ ಅವರು ನಾಮಪತ್ರ ಸಲ್ಲಿಸಿದರು. ಈ ನಾಮಪತ್ರಕ್ಕೆ ಸೂಚಕರಾಗಿ ಪಂಚಾಯತ್ ಸದಸ್ಯ ಅಶ್ವಿನ್ ರೋಚ್ ಅವರು ಸಹಿಹಾಕಿದ್ದರು. ಬಳಿಕ ನಡೆದ ಚುನಾಚಣೆ ಪ್ರಕ್ರಿಯೆಯಲ್ಲಿ ಮಹೇಶ್ ಕೋಟ್ಯಾನ್ 10 ಮತ ಪಡೆದರೆ ಧರಣೇಶ್ 9 ಮತಗಳನ್ನು ಪಡೆದು ಪರಾಜಿತರಾದರು. ಧರಣೇಶ್ ಮತ್ತು ಅಶ್ವಿನ್ ರೋಚ್ ಅವರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದ ಕಾರಣ ಪಕ್ಷ ಅವರನ್ನು ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಿದೆ.

Leave a Reply

Your email address will not be published. Required fields are marked *

error: Content is protected !!